ಉಕ್ರೇನ್ ಯುದ್ಧ ಟೀಕಿಸಿದ್ದ ರಶ್ಯದ ಸಂಪಾದಕರಿಗೆ 8 ವರ್ಷ ಜೈಲು ಶಿಕ್ಷೆ
Update: 2024-08-30 16:39 GMT
ಮಾಸ್ಕೋ: ಉಕ್ರೇನ್‍ನಲ್ಲಿ ರಶ್ಯ ನಡೆಸುತ್ತಿರುವ ಕಾರ್ಯಾಚರಣೆಯನ್ನು ಟೀಕಿಸಿ ಲೇಖನ ಬರೆದಿದ್ದ ರಶ್ಯದ ಸುದ್ದಿಸಂಪಾದಕರೊಬ್ಬರಿಗೆ 8 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.
`ಲಿಸ್ಟೋಕ್' ಎಂಬ ಸಾಮಾಜಿಕ ಮಾಧ್ಯಮದ ಸುದ್ದಿಸಂಪಾದಕ ಸೈಬೀರಿಯಾದ ಅಲ್ಟಾಯ್ ಪ್ರಾಂತದ ಸೆರ್ಗೆಯ್ ಮಿಖೈಲೊವ್ ರಶ್ಯದ ಕಾರ್ಯಾಚರಣೆಯನ್ನು ಟೀಕಿಸಿ ಪೋಸ್ಟ್ ಮಾಡಿದ್ದರು. ಉಕ್ರೇನ್ ರಾಜಧಾನಿ ಕೀವ್‍ನ ಹೊರವಲಯದ ಬುಚಾ ಮತ್ತು ಮರಿಯುಪೋಲ್‍ನಲ್ಲಿ ನಾಗರಿಕರ ಸಾವಿನ ಬಗ್ಗೆ ಟೀಕಿಸಿದ್ದ ಮಿಖೈಲೋವ್‍ರನ್ನು 2022ರಲ್ಲಿ ಬಂಧಿಸಿ, ರಶ್ಯದ ಸೇನೆಯ ವಿರುದ್ಧ ಉದ್ದೇಶಪೂರ್ವಕ ಅಪಪ್ರಚಾರ ಮಾಡುತ್ತಿರುವ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಉಕ್ರೇನ್‍ನಲ್ಲಿ ರಶ್ಯದ ಕಾರ್ಯಾಚರಣೆಯ ಕುರಿತ ಟೀಕೆಯನ್ನು ನಿಷೇಧಿಸುವ ಕಾನೂನಿನಡಿ ದಾಖಲಿಸಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 8 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.