ಕಾರ್ಮಿಕರಿಗೆ ಆದಾಯ ತೆರಿಗೆ ರದ್ದು: ಅರ್ಜೆಂಟೀನಾ ನಿರ್ಧಾರ
ಬ್ಯೂನಸ್‍ಐರಿಸ್: ಬಹುತೇಕ ಎಲ್ಲಾ ಔಪಚಾರಿಕ ವಲಯದ ಕಾರ್ಮಿಕರಿಗೆ ಆದಾಯ ತೆರಿಗೆಯನ್ನು ತೆಗೆದುಹಾಕುವ ಮಸೂದೆಯನ್ನು ಅರ್ಜೆಂಟೀನಾದ ಸಂಸತ್ ಅನುಮೋದಿಸಿದ್ದು, ಈ ನಿರ್ಧಾರವು ಈಗಾಗಲೇ 124%ಕ್ಕೆ ಏರಿಕೆಯಾಗಿರುವ ಹಣದುಬ್ಬರದ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಅರ್ಜೆಂಟೀನಾ ಸರಕಾರ ಈಗಾಗಲೇ 99%ದಷ್ಟು ವೇತನದಾರ ಕಾರ್ಮಿಕರನ್ನು ಆದಾಯ ತೆರಿಗೆ ವಿನಾಯಿತಿ ವ್ಯಾಪ್ತಿಗೆ ಸೇರಿಸಿದ್ದು ತಿಂಗಳಿಗೆ ಸುಮಾರು 5,057 ಡಾಲರ್ ವೇತನ ಪಡೆಯುವ ಕಾರ್ಮಿಕರನ್ನು ಮಾತ್ರ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಇರಿಸಿದೆ. ಆಗಸ್ಟ್‍ನಲ್ಲಿ ದೇಶದಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಹಾಲಿ ಸರಕಾರ ತೃತೀಯ ಸ್ಥಾನಕ್ಕೆ ಕುಸಿದಿದ್ದು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾರ್ಮಿಕ ವರ್ಗದ ಮತ ಸೆಳೆಯುವ ಉದ್ದೇಶದ ಈ ಮಸೂದೆಗೆ ಅಧ್ಯಕ್ಷ ಆಲ್ಬರ್ಟೋ ಫೆರ್ನಾಂಡಿಸ್ ಸಹಿ ಹಾಕಿದರೆ ಕಾಯ್ದೆಯಾಗಿ ಜಾರಿಗೊಳ್ಳಲಿದೆ.
ಆದರೆ ಸರಕಾರದ ಕ್ರಮವನ್ನು ಟೀಕಿಸಿರುವ ಐಎಎಂಎಫ್(ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ), ಇದರಿಂದಾಗಿ ಅರ್ಥವ್ಯವಸ್ಥೆಗೆ ಮತ್ತಷ್ಟು ಸವಾಲು ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದೆ