AI ಅಪಾಯದ ಬಗ್ಗೆ ಆತಂಕ: ಮಾರ್ಗಸೂಚಿ ಜಾರಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಆಗ್ರಹ
ಜಿನೆವಾ: ಕೃತಕ ಬುದ್ಧಿಮತ್ತೆ(ಎಐ)ಯ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪ್ರಥಮ ಬಾರಿಗೆ ಸಭೆ ಸೇರಿ ಚರ್ಚೆ ನಡೆಸಿದ್ದು ಇದರ ಅತಿಯಾದ ಬಳಕೆಯಿಂದ ಆಗಬಹುದಾದ ಅಪಾಯಗಳ ಬಗ್ಗೆ ಸಮಿತಿ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕೃತಕ ಬುದ್ಧಿಮತ್ತೆಯು ಎರಡು ಅಲಗಿನ ಕತ್ತಿಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಚೀನಾದ ರಾಯಭಾರಿ ಝಾಂಗ್ ಜುನ್ ವಿಶ್ಲೇಷಿಸಿದ್ದು, ಎಐಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಸ್ಥಾಪಿಸುವಲ್ಲಿ ವಿಶ್ವಸಂಸ್ಥೆಯ ಕೇಂದ್ರ ಸಮನ್ವಯ ಪಾತ್ರವನ್ನು ಚೀನಾ ಬೆಂಬಲಿಸುತ್ತದೆ. ತಂತ್ರಜ್ಞಾನದ ಬಳಕೆಯಲ್ಲಿ ತಪ್ಪಿಲ್ಲ, ಆದರೆ ತಂತ್ರಜ್ಞಾನವು ನಿಯಂತ್ರಣ ತಪ್ಪಿದ ಕುದುರೆಯಾಗಬಾರದು ಎಂದರು.
ಜನರನ್ನು ನಿಗ್ರಹಿಸಲು ಅಥವಾ ಸೆನ್ಸಾರ್ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸುವ ಸಾಧ್ಯತೆಯಿದೆ ಎಂದು ಅಮೆರಿಕ ಎಚ್ಚರಿಸಿದೆ. ಇಂಗ್ಲೆಂಡ್ ಭದ್ರತಾ ಮಂಡಳಿಯ ಜುಲೈ ತಿಂಗಳ ಕಲಾಪಗಳ ಅಧ್ಯಕ್ಷನಾಗಿರುವ ಹಿನ್ನೆಲೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ರಿಟನ್‍ನ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಮಾತನಾಡಿ, ಕೃತಕ ಬುದ್ಧಿಮತ್ತೆಯು ಮಾನವ ಜೀವನದ ಎಲ್ಲಾ ಅಂಶವನ್ನೂ ಮೂಲಭೂತವಾಗಿ ಬದಲಾಯಿಸಲಿದೆ ಎಂದರು.
ಕೃತಕ ಬುದ್ಧಿಮತ್ತೆಯನ್ನು ಬಳಸಿ ಹವಾಮಾನ ಬದಲಾವಣೆಯಂತಹ ಸಮಸ್ಯೆಗೆ ಪರಿಹಾರ ರೂಪಿಸಲು ಮತ್ತು ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಸಾಧ್ಯವಿದೆ. ಆದರೆ ತಂತ್ರಜ್ಞಾನವು ತಪ್ಪುಮಾಹಿತಿಗೆ ಕಾರಣವಾಗಬಹುದು ಮತ್ತು ಸರಕಾರ ಹಾಗೂ ಖಾಸಗಿ ವಲಯಕ್ಕೆ ಆಯುಧವಾಗಿ ಪರಿಣಮಿಸಬಹುದು. ಪರಿವರ್ತಕ ತಂತ್ರಜ್ಞಾನಗಳ ಜಾಗತಿಕ ಆಡಳಿತವನ್ನು ನಾವು ತುರ್ತಾಗಿ ರೂಪಿಸಬೇಕಿದೆ. ಏಕೆಂದರೆ ಎಐಗೆ ಯಾವುದೇ ಗಡಿಗಳಿಲ್ಲ ಎಂದವರು ಎಚ್ಚರಿಕೆ ನೀಡಿದ್ದಾರೆ.
ಕೃತಕ ಬುದ್ಧಿಮತ್ತೆಯ ಮಿಲಿಟರಿ ಮತ್ತು ಮಿಲಿಟರಿಯೇತರ ಬಳಕೆ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದರು. ಕೃತಕ ಬುದ್ಧಿಮತ್ತೆ ಎಂಬುದು ಎರಡು ಅಲಗಿನ ಕತ್ತಿಯಿದ್ದಂತೆ. ಇದರಿಂದ ಒಳಿತಾಗುತ್ತದೆಯೇ ಅಥವಾ ಕೆಡುಕಾಗುತ್ತದೆಯೇ ಎಂಬುದು ಅದರ ಬಳಕೆಯನ್ನು ಮತ್ತು ವೈಜ್ಞಾನಿಕ ಅಭಿವೃದ್ಧಿಯನ್ನು ಭದ್ರತೆಯ ಜತೆ ಸಮತೋಲನಗೊಳಿಸುವುದನ್ನು ಅವಲಂಬಿಸಿದೆ.
ಕೃತಕ ಬುದ್ಧಿಮತ್ತೆ ಎಂಬುದು ನಿಯಂತ್ರಣ ತಪ್ಪಿದ ಕುದುರೆಯಾಗಬಾರದು ಎಂದು ಚೀನಾದ ರಾಯಭಾರಿ ಝಾಂಗ್ ಜುನ್ ಹೇಳಿದರು. ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವ ಮಾನವ ಹಕ್ಕುಗಳ ಅಪಾಯವನ್ನು ತಪ್ಪಿಸಲು ಎಐ ಹಾಗೂ ಇತರ ಉದಯೋನ್ಮುಖ ತಂತ್ರಜ್ಞಾನಗಳ ವಿಷಯದಲ್ಲಿ ಎಲ್ಲಾ ದೇಶಗಳು ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಯಾವುದೇ ಸದಸ್ಯ ದೇಶಗಳು ಜನರನ್ನು ಸೆನ್ಸಾರ್ ಮಾಡಲು, ನಿರ್ಬಂಧಿಸಲು ಅಥವಾ ನಿಗ್ರಹಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಬಾರದು ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ಸಹಾಯಕ ರಾಯಭಾರಿ ಜೆಫ್ರಿ ಡಿಲಾರೆಂಟಿಸ್ ಹೇಳಿದರು. ಎಐ ಕುರಿತು ವೃತ್ತಿಪರ, ವೈಜ್ಞಾನಿಕ ಮತ್ತು ಪರಿಣತಿ ಆಧಾರಿತ ಚರ್ಚೆ ನಡೆಯಬೇಕಿದೆ ಎಂದು ರಶ್ಯದ ರಾಯಭಾರಿ ಡಿಮಿಟ್ರಿ ಪೊಲ್ಯಾಂಸ್ಕಿಯ್ ಹೇಳಿದ್ದಾರೆ.
ವಿಶ್ವಸಂಸ್ಥೆಯಡಿ ನೂತನ ವ್ಯವಸ್ಥೆ ಸ್ಥಾಪನೆಗೆ ಸದಸ್ಯರ ಒಲವು ಕೃತಕ ಬುದ್ಧಿಮತ್ತೆಯ ಅತಿಯಾದ ಬಳಕೆಯಿಂದ ಉಂಟಾಗಲಿರುವ ತೀವ್ರ ಅಪಾಯವನ್ನು ಮನಗಂಡು, ಇದರ ನಿಯಂತ್ರಣಕ್ಕೆ ವಿಶ್ವಸಂಸ್ಥೆಯ ಮೇಲುಸ್ತುವಾರಿ ಸಮಿತಿಯನ್ನು ಸ್ಥಾಪಿಸಬೇಕೆಂದು 15 ಸದಸ್ಯರ ಭದ್ರತಾ ಮಂಡಳಿ ಆಗ್ರಹಿಸಿದೆ.
ಜಾಗತಿಕ ಮಟ್ಟದಲ್ಲಿ ಪರಮಾಣು ಬಳಕೆ ನಿಯಂತ್ರಣಕ್ಕಿರುವ ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ, ಅಂತರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆಯ ರೀತಿಯಲ್ಲಿಯೇ ಹೊಸ ಸಮಿತಿ ರಚನೆಯಾಗಬೇಕು ಎಂದು ಸದಸ್ಯ ದೇಶಗಳು ಒತ್ತಾಯಿಸಿವೆ.
ಈ ಅಸಾಧಾರಣ ತಂತ್ರಜ್ಞಾನವನ್ನು ನಿಯಂತ್ರಿಸುವ ಸಾಮೂಹಿಕ ಪ್ರಯತ್ನಗಳನ್ನು ಬೆಂಬಲಿಸಲು ಹೊಸ ವಿಶ್ವಸಂಸ್ಥೆ ವ್ಯವಸ್ಥೆಯನ್ನು ರಚಿಸುವ ಆಗ್ರಹಕ್ಕೆ ಗುಟೆರಸ್ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ.