ದೇಶ ವಿರೋಧಿ ಭಾಷಣ : ಇಮ್ರಾನ್ ಸಹೋದರಿಗೆ ಸಮನ್ಸ್ ಜಾರಿ
ಇಸ್ಲಮಾಬಾದ್ : ದೇಶ ವಿರೋಧಿ ಭಾಷಣ ಮಾಡಿರುವ ಆರೋಪದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಸಹೋದರಿ ಅಲೀಮಾ ಖಾನ್‍ಗೆ ಫೆಡರಲ್ ತನಿಖಾ ಏಜೆನ್ಸಿ(ಎಫ್‍ಐಎ) ಸಮನ್ಸ್ ಜಾರಿಗೊಳಿಸಿರುವುದಾಗಿ `ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ಕ್ರಿಮಿನಲ್ ಪಿತೂರಿ ಮತ್ತು ದೇಶ ವಿರೋಧಿ ಭಾಷಣದ ಮೂಲಕ ಜನತೆ ಮತ್ತು ಪಾಕಿಸ್ತಾನದ ಸಶಸ್ತ್ರ ಪಡೆಗಳ ನಡುವೆ `ವಿಭಜನೆ' ಸೃಷ್ಟಿಸಿದ ಆರೋಪದ ವಿಚಾರಣೆಗಾಗಿ ಇಸ್ಲಮಾಬಾದ್‍ನಲ್ಲಿನ ಎಫ್‍ಐಎ ಕೇಂದ್ರ ಕಚೇರಿಯಲ್ಲಿ ಫೆಬ್ರವರಿ 6ರಂದು ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಅಲೀಮಾ ಖಾನ್‍ಗೆ ಸಮನ್ಸ್ ನೀಡಲಾಗಿದೆ. ಪಾಕಿಸ್ತಾನದ ಆಂತರಿಕ ಸಚಿವಾಲಯದ ಕೋರಿಕೆಯ ಮೇರೆಗೆ ಅಲೀಮಾ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಅಲೀಮಾ ಅವರ ಲಾಹೋರ್ ನಿವಾಸಕ್ಕೆ ತೆರಳಿ ಸಮನ್ಸ್ ನೀಡಲಾಗಿದೆ. ಅಲೀಮಾ ನಿಗದಿತ ದಿನದಂದು ವಿಚಾರಣೆಗೆ ಹಾಜರಾಗದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‍ನಲ್ಲಿ ಸೂಚಿಸಲಾಗಿದೆ.