ಗಾಝಾದಲ್ಲಿ ವಿಶ್ವಸಂಸ್ಥೆ ಸಿಬಂದಿಗಳ ಹತ್ಯೆಗೆ ಹೊಣೆಗಾರಿಕೆಯ ಕೊರತೆ ಸ್ವೀಕಾರಾರ್ಹವಲ್ಲ : ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್
ವಿಶ್ವಸಂಸ್ಥೆ : ಗಾಝಾ ಪಟ್ಟಿಯಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿ ಹಾಗೂ ಮಾನವೀಯ ನೆರವು ಕಾರ್ಯಕರ್ತರ ಹತ್ಯೆಗೆ ಹೊಣೆಗಾರಿಕೆಯ ಕೊರತೆ ಸ್ವೀಕಾರಾರ್ಹವಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ ನಿಂದ ಮುಂದುವರಿಯುತ್ತಿರುವ ಗಾಝಾ ಸಂಘರ್ಷದಲ್ಲಿ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ನಾಟಕೀಯ ಉಲ್ಲಂಘನೆಯಾಗುತ್ತಿದೆ ಮತ್ತು ನಾಗರಿಕರ ರಕ್ಷಣೆಗೆ ಪರಿಣಾಮಕಾರಿ ಕ್ರಮಗಳ ಅನುಪಸ್ಥಿತಿಯಿದೆ. ಗಾಝಾದಲ್ಲಿ ನಡೆಯುತ್ತಿರುವುದು ಖಂಡಿತಾ ಸ್ವೀಕಾರಾರ್ಹವಲ್ಲ ಎಂದವರು ಹೇಳಿದ್ದಾರೆ.
ದಾಳಿಯ ಸಂದರ್ಭ ನಾಗರಿಕರ ಸಾವು-ನೋವಿನ ಅಪಾಯವನ್ನು ಕಡಿಮೆಗೊಳಿಸಲು ಕ್ರಮ ಕೈಗೊಂಡಿದ್ದು ಗಾಝಾದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಹಮಾಸ್ ಹೋರಾಟಗಾರರು. ಅಲ್ಲದೆ ಗಾಝಾದಲ್ಲಿ ಹಮಾಸ್ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದೆ ಎಂದು ಇಸ್ರೇಲ್ ಪ್ರತಿಪಾದಿಸುತ್ತಿದೆ. ಆದರೆ ಇದನ್ನು ಹಮಾಸ್ ನಿರಾಕರಿಸಿದೆ.
ಗಾಝಾ ಸಂಘರ್ಷದ ಸಂದರ್ಭ ಸುಮಾರು 300 ಮಾನವೀಯ ನೆರವು ಕಾರ್ಯಕರ್ತರು ಹತರಾಗಿದ್ದು ಇದರಲ್ಲಿ ಮೂರನೇ ಎರಡರಷ್ಟು ವಿಶ್ವಸಂಸ್ಥೆ ಸಿಬ್ಬಂದಿಗಳು. ಈ ಹತ್ಯೆಗೆ ಸಂಬಂಧಿಸಿ ಪರಿಣಾಮಕಾರಿ ತನಿಖೆ ಹಾಗೂ ಹೊಣೆಗಾರಿಕೆಯ ಅಗತ್ಯವಿದೆ. ನಮ್ಮಲ್ಲಿ ಕೋರ್ಟ್‍ಗಳಿವೆ. ಆದರೆ ಕೋರ್ಟ್‍ಗಳ ನಿರ್ಧಾರವನ್ನು ಗೌರವಿಸಲಾಗುತ್ತಿಲ್ಲ. ಈ ರೀತಿಯ ಹೊಣೆಗಾರಿಕೆಯ ಕೊರತೆ ಖಂಡಿತಾ ಸ್ವೀಕಾರಾರ್ಹವಲ್ಲ' ಎಂದು ಗುಟೆರಸ್ ಹೇಳಿದ್ದಾರೆ.
ಫೆಲೆಸ್ತೀನ್ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದು ಕಾನೂನು ಬಾಹಿರ ಕ್ರಮವಾಗಿದ್ದು ಇಲ್ಲಿಂದ ಇಸ್ರೇಲ್ ಹಿಂದಕ್ಕೆ ಸರಿಯಬೇಕು ಎಂದು ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಐಸಿಜೆ ಜುಲೈಯಲ್ಲಿ ತೀರ್ಪು ನೀಡಿತ್ತು. ಈ ಆದೇಶವನ್ನು ಪಾಲಿಸಲು ಇಸ್ರೇಲ್‍ಗೆ 6 ತಿಂಗಳ ಗಡು ನೀಡುವ ನಿರ್ಣಯವನ್ನು ಮುಂದಿನ ವಾರ 193 ಸದಸ್ಯಬಲದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮತಕ್ಕೆ ಹಾಕುವ ನಿರೀಕ್ಷೆಯಿದೆ.
ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದಂದಿನಿಂದ ತಾನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಮಾತುಕತೆ ನಡೆಸಿಲ್ಲ. ಅವರು ನನ್ನ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆದರೆ ಅವರು ಬಯಸಿದರೆ ಮಾತುಕತೆ ನಡೆಸಲು ಸಿದ್ಧ' ಎಂದು ಗುಟೆರಸ್ ಹೇಳಿದ್ದಾರೆ. ವಿಶ್ವಸಂಸ್ಥೆಯು ಇಸ್ರೇಲ್ ವಿರೋಧಿ ಧೋರಣೆ ಹೊಂದಿದೆ ಎಂದು ನೆತನ್ಯಾಹು ಈ ಹಿಂದೆ ಆರೋಪಿಸಿದ್ದರು.
ಪ್ರಪಂಚದ ಪ್ರಸ್ತುತ ಸ್ಥಿತಿ ಅಸ್ತವ್ಯಸ್ತವಾಗಿದೆ. ಗಾಝಾದಲ್ಲಿನ ಸಂಘರ್ಷ ಮತ್ತು ಉಕ್ರೇನ್‍ನಲ್ಲಿನ ರಶ್ಯದ ಯುದ್ಧಕ್ಕೆ ಯಾವುದೇ ಶಾಂತಿಯುತ ಪರಿಹಾರದ ಮಾರ್ಗ ಕಾಣುತ್ತಿಲ್ಲ ಎಂದು ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.