ಸ್ಪೇನ್ ಪ್ರಧಾನಿಯ ಪತ್ನಿ ಬಗ್ಗೆ ಅರ್ಜೆಂಟೀನಾ ಅಧ್ಯಕ್ಷರ ಅವಹೇಳನಕಾರಿ ಹೇಳಿಕೆ | ರಾಯಭಾರಿ ವಾಪಾಸು ಕರೆಸಿಕೊಂಡ ಸ್ಪೇನ್

Update: 2024-05-20 17:28 GMT

ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೆ | Photo : x

ಮ್ಯಾಡ್ರಿಡ್: ಸ್ಪೇನ್ ರಾಜಧಾನಿ ಮ್ಯಾಡ್ರಿಡ್‍ನಲ್ಲಿ ರವಿವಾರ ನಡೆದಿದ್ದ ಬಲಪಂಥೀಯ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೆ ಸ್ಪೇನ್‍ನ ಪ್ರಧಾನಿ ಪೆಡ್ರೋ ಸ್ಯಾಂಚೆಸ್ ಅವರ ಪತ್ನಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅರ್ಜೆಂಟೀನಾದಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಳ್ಳುವುದಾಗಿ ಸ್ಪೇನ್ ಸರಕಾರ ಘೋಷಿಸಿದೆ.

ಸ್ಯಾಂಚೆಸ್ ಅವರ ಪತ್ನಿ ಬೆಗೋನ ಗೋಮೆಝ್‍ರನ್ನು `ಭ್ರಷ್ಟಾಚಾರಿ' ಎಂದು ಟೀಕಿಸಿದ್ದರು ಹಾಗೂ ಸಮಾಜವಾದವನ್ನು `ಶಾಪಗ್ರಸ್ತ ಮತ್ತು ಹಾನಿಕಾರಕ ವ್ಯವಸ್ಥೆ' ಎಂದು ಲೇವಡಿ ಮಾಡಿದ್ದರು. ಸ್ಪೇನ್ ಅಧ್ಯಕ್ಷರ `ಸೋಷಿಯಲಿಸ್ಟ್ ಪಾರ್ಟಿ'ಯನ್ನು ಗುರಿಯಾಗಿಸಿ ಈ ಹೇಳಿಕೆ ನೀಡಿದ್ದಾರೆಂದು ವಿಶ್ಲೇಷಿಸಲಾಗಿದೆ.

ಈ ರ‍್ಯಾಲಿಯಲ್ಲಿ ಸ್ಪೇನ್‍ನ ಹಲವು ಅಂತರಾಷ್ಟ್ರೀಯ ಮಿತ್ರದೇಶಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಅರ್ಜೆಂಟೀನಾ ಅಧ್ಯಕ್ಷರ ನಡವಳಿಕೆಯನ್ನು ಸ್ಪೇನ್ ಸರಕಾರ ತೀವ್ರವಾಗಿ ಖಂಡಿಸಿದ್ದು ಜೇವಿಯರ್ ಮಿಲೆ ತಕ್ಷಣ ಕ್ಷಮೆ ಯಾಚಿಸಬೇಕೆಂದು ಸ್ಪೇನ್‍ನ ವಿದೇಶಾಂಗ ಸಚಿವ ಜೋಸ್ ಮ್ಯಾನುವೆಲ್ ಆಗ್ರಹಿಸಿದ್ದಾರೆ. ತಮ್ಮ ವರ್ತನೆಯಿಂದ ಮಿಲೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ತೀವ್ರ ಹಾನಿ ತಂದಿದ್ದಾರೆ ಎಂದವರು ಖಂಡಿಸಿದ್ದಾರೆ.

ಆದರೆ ಅಧ್ಯಕ್ಷರು ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲವೆಂದು ಅರ್ಜೆಂಟೀನಾ ಅಧ್ಯಕ್ಷರ ವಕ್ತಾರರು ಹೇಳಿದ್ದು ಸ್ಪೇನ್ ಅಧಿಕಾರಿಗಳು ಮಿಲೆ ವಿರುದ್ಧ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಮೊದಲು ವಾಪಾಸು ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಸ್ಪೇನ್‍ಗೆ ನೀಡಿದ್ದ ಭೇಟಿ ಸಂದರ್ಭ ಸ್ಪೇನ್‍ನ ದೊರೆಯನ್ನು ಭೇಟಿಯಾಗಲು ಮಿಲೆ ನಿರಾಕರಿಸುವ ಮೂಲಕ ರಾಜತಾಂತ್ರಿಕ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದರು ಎಂದು ವರದಿಯಾಗಿದೆ.

ರಾಜಕೀಯ ಮುಖಂಡರ ಕುಟುಂಬದ ಸದಸ್ಯರ ವಿರುದ್ಧ ದಾಳಿಗೆ ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಜಾಗವಿಲ್ಲ ಎಂದು ಯುರೋಪಿಯನ್ ಯೂನಿಯನ್‍ನ ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಪ್ರತಿಕ್ರಿಯಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News