ಸುಡಾನ್ ನಲ್ಲಿ ಅಣೆಕಟ್ಟು ಕುಸಿದು ಕನಿಷ್ಠ 30 ಮಂದಿ ಮೃತ್ಯು

Update: 2024-08-28 02:21 GMT

ಖಾರ್ಟೂಮ್ : ಸುಡಾನ್ ನಲ್ಲಿ ಧಾರಾಕಾರ ಮಳೆಯಿಂದಾಗಿ ಪೂರ್ವದಲ್ಲಿರುವ ಅರ್ಬಾಟ್ ಅಣೆಕಟ್ಟು ಕುಸಿದು ಕನಿಷ್ಠ 30 ಮಂದಿ ಮೃತಪಟ್ಟಿದ್ದು ಹಲವು ಮನೆಗಳು ಜಲಾವೃತಗೊಂಡಿರುವುದಾಗಿ ವಿಶ್ವಸಂಸ್ಥೆ ಏಜೆನ್ಸಿ ಹೇಳಿದೆ.

ಕೆಂಪು ಸಮುದ್ರದಲ್ಲಿರುವ ಸುಡಾನ್ ಬಂದರಿನ ಉತ್ತರದಲ್ಲಿರುವ ಅಣೆಕಟ್ಟು ರವಿವಾರ ಕುಸಿದಿದ್ದು ಇದುವರೆಗೆ 30 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಸಾವು ನೋವಿನ ಸಂಖ್ಯೆ ಹೆಚ್ಚಬಹುದು. ಅಣೆಕಟ್ಟಿನ ಸುತ್ತಮುತ್ತದ ಸುಮಾರು 70 ಗ್ರಾಮಗಳು ಜಲಾವೃತಗೊಂಡಿದ್ದು 20 ಗ್ರಾಮಗಳಿಗೆ ಹಾನಿಯಾಗಿದೆ.

ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶದ ಜನಸಂಖ್ಯೆಯ 77%ದಷ್ಟು ಜನರು ಸಂತ್ರಸ್ತರಾಗಿದ್ದಾರೆ. ಇವರಿಗೆ ಆಹಾರ, ನೀರು ಮತ್ತು ಆಶ್ರಯದ ತುರ್ತು ಅಗತ್ಯವಿದೆ. ಅಣೆಕಟ್ಟು ಕುಸಿತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ (ಒಸಿಎಚ್ಎಜ) ಹೇಳಿದೆ.

80ಕ್ಕೂ ಅಧಿಕ ಕೊಳವೆಬಾವಿಗಳು ಕುಸಿದಿವೆ. 10,000 ಜಾನುವಾರುಗಳು ಕಾಣೆಯಾಗಿವೆ ಮತ್ತು 70 ಶಾಲೆಗಳು ನಾಶವಾಗಿವೆ ಅಥವಾ ಹಾನಿಗೀಡಾಗಿವೆ. ಈ ತಿಂಗಳು ಸುಡಾನ್ನ.ಲ್ಲಿ ಸುರಿದ ಧಾರಾಕಾರ ಮಳೆಯು 3,17,000ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಇವರಲ್ಲಿ 1,18,000ಕ್ಕೂ ಅಧಿಕ ಜನರು ನೆಲೆ ಕಳೆದುಕೊಂಡಿದ್ದು ಇದು ಈಗಾಗಲೇ ಯುದ್ಧದಿಂದ ಜರ್ಝರಿತಗೊಂಡಿರುವ ದೇಶದಲ್ಲಿ ಸ್ಥಳಾಂತರದ ಬಿಕ್ಕಟ್ಟನ್ನು ಉಲ್ಬಣಿಸಿದೆ.      

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News