ಟೇಲರ್ ಸ್ವಿಫ್ಟ್ ಸಂಗೀತಗೋಷ್ಠಿ ಮೇಲೆ ದಾಳಿ ಸಂಚು | ಇನ್ನೋರ್ವ ಆರೋಪಿ ಬಂಧನ
ವಿಯೆನ್ನಾ : ಆಸ್ಟ್ರೀಯಾ ರಾಜಧಾನಿ ವಿಯೆನ್ನಾದಲ್ಲಿ ನಡೆಯಲಿದ್ದ ಪಾಪ್ ಗಾಯಕಿ ಟೇಲರ್ ಸ್ವಿಫ್ಟ್ ಅವರ ಸಂಗೀತಗೋಷ್ಠಿ ಕಾರ್ಯಕ್ರಮದ ಮೇಲೆ ದಾಳಿಗೆ ಸಂಚು ನಡೆಸಿದ ಆರೋಪದಲ್ಲಿ ಇನ್ನೋರ್ವ ಹದಿಹರೆಯದ ತರುಣನನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಮೂರಕ್ಕೇರಿದೆ.
ಈ ದಾಳಿ ಸಂಚಿನ ಮುಖ್ಯ ಸೂತ್ರಧಾರಿಯ ಜೊತೆ ಈತ ಸತತವಾಗಿ ಸಂಪರ್ಕದಲ್ಲಿದ್ದನು. ಆದರೆ ಆತ ದಾಳಿ ಸಂಚಿನಲ್ಲಿ ನೇರವಾಗಿ ಶಾಮೀಲಾಗಿರಲಿಲ್ಲವೆಂದು ಆಸ್ಟ್ರಿಯಾದ ಆಂತರಿಕ ಸಚಿವ ಜೆರ್ಹಾರ್ಡ್ ಕಾರ್ನರ್ ತಿಳಿಸಿದ್ದಾರೆ. ಆತ ಐಸಿಎಸ್ ಭಯೋತ್ಪಾದನಾ ಸಂಘಟನೆಗೆ ನಿಷ್ಠೆಯನ್ನು ಘೋಷಿಸುವ ಪ್ರಮಾಣವನ್ನು ಆಗಸ್ಟ್ 6ರಂದು ಸ್ವೀಕರಿಸಿದ್ದುದು ಕೆಲವು ದಿನಗಳ ಹಿಂದೆ ತಿಳಿದುಬಂದಿದೆ ಎಂದರು.
ಟೇಲರ್ ಸ್ವಿಫ್ಟ್ ಸಂಗೀತಗೋಷ್ಠಿಯ ಮೇಲೆ ದಾಳಿ ನಡೆಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರದಂದು 19 ವರ್ಷ ವಯಸ್ಸಿನ ಪ್ರಮುಖ ಶಂಕಿತ ಆರೋಪಿ ಹಾಗೂ ಇನ್ನೋರ್ವ 17 ವರ್ಷವ ತರುಣನನ್ನು ಆಸ್ಟ್ರಿಯಾ ಪೊಲೀಸರು ಬಂಧಿಸಿದ್ದರು. 15 ವರ್ಷ ವಯಸ್ಸಿನ ಇನ್ನೋರ್ವ ಬಾಲಕನನ್ನು ಕೂಡಾ ಪೊಲೀಸರು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದುಬಂದಿದೆ.
ಐಸಿಸ್ ಹಾಗೂ ಅಲ್ ಖಾಯಿದಾ ಭಯೋತ್ಪಾದಕ ಗುಂಪುಗಳಿಂದ ಪ್ರೇರಿತರಾಗಿ ಆರೋಪಿಗಳು ದಾಳಿ ಸಂಚು ನಡೆಸಿದ್ದಾರೆಂದು ಮೇಲ್ನೋಟದ ತನಿಖೆಯಿಂದ ತಿಳಿದುಬಂದಿದೆ. ಶಂಕಿತನ ಮನೆಯೊಂದರಿಂದ ಬಾಂಬ್ ತಯಾರಿಕಾ ಸಾಮಾಗ್ರಿಗಳು ಪತ್ತೆಯಾಗಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸಂಗೀತಗೋಷ್ಠಿಯ ಸ್ಥಳದ ಹೊರಗಡೆ ಸಾಧ್ಯವಿದ್ದಷ್ಟು ವ್ಯಕ್ತಿಗಳ ಹತ್ಯೆ ನಡೆಸುವ ಸಂಚನ್ನು ಶಂಕಿತರು ಹೊಂದಿದ್ದರೆನ್ನಲಾಗಿದೆ.
ವಿಯೆನ್ನಾದ ಆರ್ನೆಸ್ಟ್ ಹ್ಯಾಪೆಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದ ಸ್ವಿಫ್ಟ್ ಅವರ ‘ಎರಾಸ್ ಟೂರ್ ಶೋ’ ಅನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ವಿಮಾನಯಾನ ಹಾಗೂ ಲಾಡ್ಜಿಂಗ್ಗಾಗಿ ಸಾವಿರಾರು ಡಾಲರ್ ಪಾವತಿಸಿದ್ದ ಅಭಿಮಾನಿಗಳು ನಿರಾಶರಾಗಿ ಮರಳಬೇಕಾಗಿದೆ.
ಅಲ್ಲದೆ ಟೇಲರ್ ಸ್ವಿಫ್ಟ್ ಅವರ ಇತರ ಮೂರು ಪೂರ್ವಯೋಜಿತ ಸಂಗೀತಗೋಷ್ಠಿಗಳನ್ನು ರದ್ದುಪಡಿಸಲಾಗಿದೆ. ವಿಯೆನ್ನಾದಲ್ಲಿ ಪ್ರತಿ ಸಂಗೀತಗೋಷ್ಠಿಯಲ್ಲೂ ಕ್ರೀಡಾಂಗಣದ ಒಳಗೆ 65 ಸಾವಿರ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿತ್ತು. ಕ್ರೀಡಾಂಗಣದ ಹೊರಗಡೆ 30 ಸಾವಿರ ವೀಕ್ಷಕರು ಜಮಾಯಿಸುವ ಸಾಧ್ಯತೆಯಿದ್ದು, ಅಲ್ಲಿ ಶಂಕಿತ ಆರೋಪಿಗಳು ದಾಳಿಗೆ ಸಂಚು ಹೂಡಿದ್ದರೆನ್ನಲಾಗಿದೆ. ಗುರುವಾರ ಇಲ್ಲವೇ ಶುಕ್ರವಾರದಂದು ಸಂಗೀತಗೋಷ್ಠಿಯ ಮೇಲೆ ದಾಳಿಗೆ ಅವರು ಸಂಚು ಹೂಡಿದ್ದರು ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಸಂಗೀತಗೋಷ್ಠಿಯ ಸಂದರ್ಭ ಸಾಧ್ಯವಾದಷ್ಟು ಮಂದಿಯನ್ನು ಹತ್ಯೆಗೈದು ರಕ್ತಪಾತ ಸೃಷ್ಟಿಸುವುದೇ ತನ್ನ ಉದ್ದೇಶವಾಗಿತ್ತೆಂದು ಪ್ರಮುಖ ಬಂಧಿತ ಆರೋಪಿಯು ವಿಚಾರಣೆಯ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.