ರಫಾ ಮೇಲೆ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್ ವಿರುದ್ಧ ಟ್ವೀಟ್ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟಿಗ ಟ್ರಾವಿಸ್ ಹೆಡ್
ಮೆಲ್ಬೋರ್ನ್: ಗಾಝಾದ ದಕ್ಷಿಣ ನಗರವಾದ ರಫಾ ಮೇಲೆ ಇಸ್ರೇಲ್ ತನ್ನ ವೈಮಾನಿಕ ದಾಳಿಯನ್ನು ಪುನಾರಂಭಿಸಿರುವುದರ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅನೇಕ ಭಾರತೀಯ ಸೆಲೆಬ್ರಿಟಿಗಳೂ ಇಸ್ರೇಲ್ ಬಾಂಬ್ ದಾಳಿಯನ್ನು ಕಟುವಾಗಿ ಖಂಡಿಸಿದ್ದಾರೆ. ಇದೀಗ ಈ ಸಾಲಿಗೆ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಕೂಡಾ ಸೇರ್ಪಡೆಯಾಗಿದ್ದಾರೆ.
ಇಸ್ರೇಲ್ ದಾಳಿಯನ್ನು ಖಂಡಿಸಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಾವಿಸ್ ಹೆಡ್, ರಫಾ ಪರವಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಅವರೂ ಕೂಡಾ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ‘All Eyes On Rafah’ ಪೋಸ್ಟರನ್ನು ಹಂಚಿಕೊಂಡಿದ್ದು, ಮತ್ತೊಂದು ಪೋಸ್ಟ್ ನಲ್ಲಿ “ಸ್ವಾತಂತ್ರ್ಯ ಮನುಷ್ಯನ ಹಕ್ಕು. ಎಲ್ಲ ಜೀವಿಗಳೂ ಸಮಾನ” ಎಂದು ಹೇಳುವ ಮೂಲಕ ರಫಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿದ್ದಾರೆ. ಆ ವಾಕ್ಯವನ್ನು ತಮ್ಮ ಶೂ ಮೇಲೂ ಅವರು ಬರೆದುಕೊಂಡಿದ್ದಾರೆ.
ರಫಾ ಮೇಲೆ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಯಲ್ಲಿ ಈವರೆಗೆ 47 ಮಂದಿ ನಾಗರಿಕರು ಹತರಾಗಿದ್ದಾರೆ. ಈ ಕುರಿತು ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೆ ಘಟನೆಯ ಕುರಿತು ಕ್ಷಮೆ ಯಾಚಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ವಿರುದ್ಧದ ಕಾರ್ಯಾಚರಣೆಯು ಮುಂದುವರಿಯಲಿದೆ ಎಂದೂ ದೃಢಪಡಿಸಿದ್ದಾರೆ.