ಬಾಂಗ್ಲಾ | ಅವಾಮಿಲೀಗ್ ನಾಯಕನ ಒಡೆತನದ ಹೊಟೇಲ್‌ಗೆ ಗುಂಪಿನಿಂದ ದಾಳಿ ; 24 ಮಂದಿಯ ಸಜೀವ ದಹನ

Update: 2024-08-06 15:58 GMT

PC :newsdrum.in

ಢಾಕಾ : ಅವಾಮಿ ಲೀಗ್ ಪಕ್ಷದ ನಾಯಕರೊಬ್ಬರ ಮಾಲಕತ್ವದ ಹೊಟೇಲ್ ಮೇಲೆ ಉದ್ರಿಕ್ತ ಗುಂಪೊಂದು ಸೋಮವಾರ ತಡ ರಾತ್ರಿ ದಾಳಿ ನಡೆಸಿ, 24 ಮಂದಿಯನ್ನು ಜೀವಂತವಾಗಿ ದಹಿಸಿದ ಭೀಕರ ಘಟನೆ ಬಾಂಗ್ಲಾದ ಜಶೋರ್‌ನಲ್ಲಿ ನಡೆದಿದೆ.

ಅವಾಮಿ ಲೀಗ್ ಪಕ್ಷದ ನಾಯಕಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನಗೈದ ಬೆನ್ನಲ್ಲೇ ಈ ನರಮೇಧ ನಡೆದಿದೆ.

ಈ ಹೊಟೇಲ್ ಅವಾಮಿ ಲೀಗ್ ಪಕ್ಷದ ಜಶೋರ್ ಜಿಲ್ಲಾ ಘಟಕದ ಕಾರ್ಯದರ್ಶಿ ಶಾಹೀನ್ ಚಕ್ಲದಾರ್ ಅವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಹೊಟೇಲ್‌ನ ವಸತಿಕೊಠಡಿಗಳಲ್ಲಿ ತಂಗಿದ್ದವರೆಂದು ತಿಳಿದುಬಂದಿದೆ. ಸಾವನ್ನಪ್ಪಿದವರಲ್ಲಿ ಓರ್ವ ಇಂಡೊನೇಶ್ಯದ ಪ್ರಜೆ.

ಬೆಂಕಿಯಿದ ಸುಟ್ಟುಕರಕಲಾದ ಹೊಟೇಲ್‌ನ ಅವಶೇಷಗಳಡಿಯಲ್ಲಿ ಇನ್ನಷ್ಟು ಮೃತದೇಹಗಳು ಸಿಲುಕಿರುವ ಸಾಧ್ಯತೆಯಿದೆಯೆಂದು, ಬದುಕುಳಿದಿರುವ ಹೊಟೇಲ್ ಸಿಬ್ಬಂದಿ ತಿಳಿಸಿದ್ದಾರೆ.

ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಗುಂಪೊಂದು ಹೊಟೇಲ್‌ನ ತಳ ಅಂತಸ್ತಿಗೆ ಬೆಂಕಿಹಚ್ಚಿದ್ದು, ಅದು ಮೇಲಿನ ಅಂತಸ್ತುಗಳಿಗೂ ಕ್ಷಿಪ್ರವಾಗಿ ಹರಡಿತೆಂದು ವರದಿಗಳು ತಿಳಿಸಿವೆ.

ಸೋಮವಾರ ಬಾಂಗ್ಲಾದ ವಿವಿಧೆಡೆ ಉದ್ರಿಕ್ತ ಗುಂಪುಗಳು ಹಲವಾರು ಅವಾಮಿ ಲೀಗ್ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ನಿವಾಸಗಳು ಹಾಗೂ ಉದ್ಯಮ ಸಂಸ್ಥಾಪನೆಗಳಿಗೆ ಮತ್ತು ದಾಳಿ ನಡೆಸಿದ್ದರು. ರಾಜಧಾನಿ ಢಾಕಾದಲ್ಲಿರುವ ಅವಾಮಿ ಲೀಗ್ ಮುಖ್ಯ ಕಾರ್ಯಾಲಯಗಳಿಗೂ ನುಗ್ಗಿ ದಾಂಧಲೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News