ಅಸಹಕಾರ ಆಂದೋಲನಕ್ಕೆ ಬಾಂಗ್ಲಾ ವಿದ್ಯಾರ್ಥಿಗಳ ಕರೆ
ಢಾಕಾ : ಪ್ರತಿಭಟನಾಕಾರರ ವಿರುದ್ಧ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಪ್ರಧಾನಿ ಶೇಖ್ ಹಸೀನಾ ಸರಕಾರದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿರುವಂತೆಯೇ, ದೇಶದಾದ್ಯಂತ ಅಸಹಾರಕ ಚಳವಳಿ ನಡೆಸಲು ವಿದ್ಯಾರ್ಥಿಗಳು ಶನಿವಾರ ಕರೆ ನೀಡಿದ್ದಾರೆ.
ಸರಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ವಿರೋಧಿಸಿ ಬಾಂಗ್ಲಾದೇಶದಲ್ಲಿ ಕಳೆದ ತಿಂಗಳು ಆರಂಭವಾಗಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಕಳೆದ ವಾರ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆ ನಡೆಸಿದ್ದ ಕಾರ್ಯಾಚರಣೆ ಸಂದರ್ಭ 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಸುಪ್ರೀಂಕೋರ್ಟ್ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಪ್ರತಿಭಟನೆ ಸ್ಥಗಿತಗೊಳಿಸಿದ್ದರು. ಆದರೆ ಬಂಧನದಲ್ಲಿರುವ ವಿದ್ಯಾರ್ಥಿ ಮುಖಂಡರನ್ನು ತಕ್ಷಣ ಬಿಡುಗಡೆಗೊಳಿಸುವಂತೆ, ಕಳೆದ ತಿಂಗಳ ಹಿಂಸಾಚಾರಕ್ಕೆ ಹಸೀನಾರಿಂದ ಸಾರ್ವಜನಿಕ ಕ್ಷಮೆ ಯಾಚನೆ, ಹಲವು ಸಚಿವರ ವಜಾ, ಶಾಲೆ ಮತ್ತು ವಿವಿಗಳ ಪುನರಾರಂಭಕ್ಕೆ ಆಗ್ರಹಿಸಿ ಶುಕ್ರವಾರ ಮತ್ತೆ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಹಸೀನಾ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಘೋಷಣೆ ಕೂಗಿದರು.
`ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿದಿರುವುದು, ಸರಕಾರಿ ಉದ್ಯೋಗಿಗಳ ಮುಷ್ಕರ, ಬ್ಯಾಂಕ್‍ಗಳ ಮೂಲಕ ನಡೆಯುವ ಸಾಗರೋತ್ತರ ಪಾವತಿಗಳನ್ನು ತಡೆಹಿಡಿಯುವ ಮೂಲಕ ಅಸಹಾಕಾರ ಆಂದೋಲನ'ಕ್ಕೆ ಕರೆ ನೀಡಿರುವುದಾಗಿ ವಿದ್ಯಾರ್ಥಿಗಳ ಸಂಘಟನೆ ಹೇಳಿದೆ.