ಬಾಂಗ್ಲಾದೇಶ ಬಿಕ್ಕಟ್ಟು | ಲಂಡನ್‌ಗೆ ತೆರಳಲಿರುವ ಶೇಖ್ ಹಸೀನಾ : ಮೂಲಗಳು

Update: 2024-08-05 13:36 GMT

ಶೇಖ್ ಹಸೀನಾ | PC : PTI  

ಹೊಸದಿಲ್ಲಿ : ಸರಕಾರದ ಮೀಸಲಾತಿ ವಿರೋಧಿ ಪ್ರತಿಭಟನೆಗಳು ಬೃಹತ್ ಸ್ವರೂಪ ಪಡೆದುಕೊಂಡ ನಂತರ ಸೋಮವಾರ ರಾಜೀನಾಮೆ ನೀಡಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತದ ಮೂಲಕ ಲಂಡನ್‌ಗೆ ತೆರಳುತ್ತಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಸೀನಾ ಅವರು ಬಾಂಗ್ಲಾದೇಶದ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅದು ಭಾರತದ ಉತ್ತರ ಪ್ರದೇಶದ ಗಾಝಿಯಾಬಾದ್ ಸಮೀಪದ ಹಿಂಡನ್ ವಾಯುನೆಲೆಯಲ್ಲಿ ಇಳಿದಿದೆ.

ಮಿಲಿಟರಿ ಹೆಲಿಕಾಪ್ಟರ್ ಶೇಖ್ ಹಸೀನಾ ಅವರನ್ನು ಭಾರತದ ವಾಯುನೆಲೆಯಿಂದ ಲಂಡನ್ ಗೆ ಕರೆದೊಯ್ಯುತ್ತದೆಯೇ ಅಥವಾ ಅವರು ಬೇರೆ ವಿಮಾನದಲ್ಲಿ ಲಂಡನ್‌ಗೆ ಪ್ರಯಾಣಿಸುತ್ತಾರೆಯೇ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ಢಾಕಾದ ರಾಜತಾಂತ್ರಿಕರ ಕೋರಿಕೆಯ ಮೇರೆಗೆ ಹಸೀನಾ ಅವರ ಹೆಲಿಕಾಪ್ಟರ್ ಗೆ ಭಾರತೀಯ ವಾಯುಪ್ರದೇಶದ ಮೂಲಕ ಸುರಕ್ಷಿತ ಮಾರ್ಗವನ್ನು ಒದಗಿಸಲು ಭಾರತ ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಮೀಸಲಾತಿಯಡಿ 1971 ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹೋರಾಡಿದ ಯೋಧರ ಕುಟುಂಬಗಳಿಗೆ ನಾಗರಿಕ ಸೇವಾ ಉದ್ಯೋಗಗಳಲ್ಲಿ ಶೇ. 30 ಮೀಸಲಾತಿಯನ್ನು ಒದಗಿಸಿದ್ದು ವಿವಾದಾತ್ಮಕ ಸ್ವರೂಪ ಪಡೆದುಕೊಂಡಿತ್ತು. ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈಗ ನಡೆಯುತ್ತಿರುವ ಪ್ರತಿಭಟನೆಗಳು ಸರ್ಕಾರದ ವಿರುದ್ಧದ ಆಂದೋಲನವಾಗಿ ಮಾರ್ಪಟ್ಟಿವೆ. ಕಳೆದ ಎರಡು ದಿನಗಳಿಂದ ಹಸೀನಾ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News