ಬಾಂಗ್ಲಾಕ್ಕೆ ಎರಡನೇ ಸ್ವಾತಂತ್ರ್ಯ ಸಿಕ್ಕಿತು: ಮುಹಮ್ಮದ್ ಯೂನಸ್

Update: 2024-08-08 16:11 GMT

Photo : wikipedia

ಢಾಕಾ, ಆ.8: ಬಾಂಗ್ಲಾದೇಶಕ್ಕೆ ಎರಡನೇ ಸ್ವಾತಂತ್ರ್ಯ ಸಿಕ್ಕಿದೆ. ಇಂದು ನಮಗೆ ಮಹತ್ವದ ದಿನವಾಗಿದೆ' ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕøತ ಮುಹಮ್ಮದ್ ಯೂನಸ್ ಗುರುವಾರ ಹೇಳಿದ್ದಾರೆ.

ಮಧ್ಯಂತರ ಸರಕಾರದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಲು ಪ್ಯಾರಿಸ್ನಿಂದ ಢಾಕಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು `ಮನೆಗೆ ಮರಳಿರುವುದರಿಂದ ಮನಸ್ಸಿಗೆ ನೆಮ್ಮದಿಯಾಗಿದೆ' ಎಂದು ಹೇಳಿದರು. ಒಂದು ತಿಂಗಳಿಗೂ ಹೆಚ್ಚು ಸಮಯ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ಬಳಿಕ, ಚುನಾವಣೆ ನಡೆಯುವವರೆಗೆ ಮಧ್ಯಂತರ ಸರಕಾರವನ್ನು ಮುನ್ನಡೆಸಲು 84 ವರ್ಷದ ಯೂನಸ್ರನ್ನು ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ನೇಮಕಗೊಳಿಸಿದ್ದರು.

ಹಿಂಸಾತ್ಮಕ ಪ್ರತಿಭಟನೆ, ಘರ್ಷಣೆಯಲ್ಲಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಿದ ಮುಹಮ್ಮದ್ ಯೂನಸ್ `ಇವರ ತ್ಯಾಗದಿಂದ ರಾಷ್ಟ್ರಕ್ಕೆ ಎರಡನೇ ಸ್ವಾತಂತ್ರ್ಯ ದಕ್ಕಿದೆ. ಬಾಂಗ್ಲಾದೇಶ ಹೊಸ ವಿಜಯದ ದಿನವನ್ನು ಸೃಷ್ಟಿಸಿದೆ . ಇದೀಗ ಶಾಂತಿ, ಕಾನೂನು ಸುವ್ಯವಸ್ಥೆ ಸ್ಥಾಪನೆಗೆ ನಾವು ಮೊದಲ ಆದ್ಯತೆ ನೀಡಬೇಕಿದೆ. ಕಾನೂನು ಸುವ್ಯವಸ್ಥೆ ಸ್ಥಾಪನೆಯಾಗದೆ ನಾವು ಒಂದು ಹೆಜ್ಜೆಯನ್ನೂ ಮುಂದಿರಿಸಲು ಆಗದು ಎಂದರು. `ನಿಮಗೆ ನನ್ನ ಮೇಲೆ ವಿಶ್ವಾಸವಿರುವುದಾದರೆ, ದೇಶದ ಎಲ್ಲಿಯೂ, ಯಾರ ವಿರುದ್ಧವೂ ದಾಳಿ ನಡೆಯದಂತೆ ನೋಡಿಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಸಹೋದರರು. ಅವರನ್ನು ರಕ್ಷಿಸುವುದು ನಮ್ಮ ಕಾರ್ಯವಾಗಿದೆ. ಇಡೀ ಬಾಂಗ್ಲಾದೇಶವು ಒಂದು ದೊಡ್ಡ ಕುಟುಂಬವಾಗಿದೆ' ಎಂದರು.

ಬಾಂಗ್ಲಾದೇಶ ಒಂದು ಸುಂದರ ದೇಶವಾಗಬಹುದಿತ್ತು. ಆದರೆ ನಾವು ಈ ಸಾಧ್ಯತೆಗಳನ್ನು ನಾಶಪಡಿಸಿದ್ದೇವೆ. ಈಗ ಮತ್ತೆ ಹೊಸ ಬೀಜವನ್ನು ಬಿತ್ತಬೇಕಿದೆ. ದೇಶವನ್ನು ನಿರ್ಮಿಸಲು ಯುವಜನತೆ ಅಗತ್ಯವಿದೆ ಮತ್ತು ಅವರಿಂದಲೇ ದೇಶವನ್ನು ಮರು ನಿರ್ಮಿಸಲಿದ್ದೇವೆ . ಹೊಸ ಬಾಂಗ್ಲಾದೇಶವನ್ನು ನಿರ್ಮಿಸುವಲ್ಲಿ ನಾವು ಶೀಘ್ರವಾಗಿ ಮುಂದುವರಿಯಲಿದ್ದೇವೆ ಮತ್ತು ಈ ಕಾರ್ಯವನ್ನು ಇಂದೇ ಆರಂಭಿಸಲಿದ್ದೇವೆ' ಎಂದವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

► ಮಧ್ಯಂತರ ಸರಕಾರ ಶಾಂತಿ, ಸ್ಥಿರತೆಗೆ ಪ್ರಮುಖವಾಗಿದೆ: ಅಮೆರಿಕ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕøತ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ರಚನೆಯಾಗುವ ಮಧ್ಯಂತರ ಸರಕಾರ ದೀರ್ಘಾವಧಿಯ ಶಾಂತಿ ಮತ್ತು ಸ್ಥಿರತೆಗೆ ಪ್ರಮುಖವಾಗಿದೆ ಎಂದು ಅಮೆರಿಕ ಹೇಳಿದ್ದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಜತೆ ಕಾರ್ಯನಿರ್ವಹಿಸಲು ಸಿದ್ಧ ಎಂದಿದೆ.

ಬಾಂಗ್ಲಾದೇಶದ ಬೆಳವಣಿಗೆಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಮಧ್ಯಂತರ ಸರಕಾರದ ಮುಖ್ಯಸ್ಥರನ್ನಾಗಿ ಮುಹಮ್ಮದ್ ಯೂನಸ್ರನ್ನು ನೇಮಕಗೊಳಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಮಧ್ಯಂತರ ಸರಕಾರ ರಚನೆಯ ಸಂದರ್ಭ ಪ್ರಜಾಪ್ರಭುತ್ವದ ಮೌಲ್ಯಗಳು, ಕಾನೂನು ಮತ್ತು ಬಾಂಗ್ಲಾದೇಶದ ಜನರ ಇಚ್ಛೆಯನ್ನು ಗೌರವಿಸುವ ಅಗತ್ಯವಿದೆ ಎಂದು ಅಮೆರಿಕ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News