ಬಾಂಗ್ಲಾದೇಶ: ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಸರಕಾರದ ಆದೇಶ
ಢಾಕಾ: ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರದಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತದ ಎಲ್ಲಾ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚುವಂತೆ ಸರಕಾರ ಮಂಗಳವಾರ ಆದೇಶಿಸಿದೆ.
ಸರಕಾರಿ ಉದ್ಯೋಗದಲ್ಲಿ 30%ವನ್ನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರಿಗೆ ಮೀಸಲಿಡುವ ಸರಕಾರದ ಕ್ರಮವನ್ನು ವಿರೋಧಿಸಿ ಕೆಲವು ವಾರಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು, ಲಾಠಿ ಚಾರ್ಜ್ ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿರುವುದಾಗಿ ವರದಿಯಾಗಿದೆ.
ಪೊಲೀಸರ ಕ್ರಮವನ್ನು ಖಂಡಿಸಿರುವ ಆಮ್ನೆಸ್ಟಿ ಇಂಟರ್ನ್ಯಾಷನಲ್ `ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುವವರ ಸುರಕ್ಷತೆ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯನ್ನು ತಕ್ಷಣವೇ ಖಾತರಿಪಡಿಸುವಂತೆ ಬಾಂಗ್ಲಾ ಸರಕಾರವನ್ನು ಆಗ್ರಹಿಸಿದೆ.