ಬಾಂಗ್ಲಾದೇಶದಲ್ಲಿ ತೀವ್ರಗೊಂಡ ವಿದ್ಯಾರ್ಥಿಗಳ ಪ್ರತಿಭಟನೆ; 39 ಮಂದಿ ಮೃತ್ಯು
ಢಾಕಾ: ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆಯ ವಿರುದ್ಧ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾನಿರತ ವಿದ್ಯಾರ್ಥಿಗಳು, ಭದ್ರತಾ ಪಡೆಗಳು ಹಾಗೂ ಸರಕಾರದ ಪರ ಇರುವ ವಿದ್ಯಾರ್ಥಿ ಸಂಘಟನೆಗಳ ಹೋರಾಟಗಾರರ ನಡುವಿನ ಸಂಘರ್ಷ ಮುಂದುವರಿದಿದೆ. ಈ ಸಂಘರ್ಷದಲ್ಲಿ ಇದುವರೆಗೆ 39 ಮಂದಿ ಮೃತಪಟ್ಟಿದ್ದು, ಗುರುವಾರ ಅತ್ಯಂತ ಹೆಚ್ಚು ಹಿಂಸಾಚಾರಕ್ಕೆ ಸಾಕ್ಷಿಯಾದ ದಿನವಾಗಿ ದಾಖಲಾಗಿದೆ.
ದೇಶಾದ್ಯಂತ ರಸ್ತೆ ತಡೆಗೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಯತ್ನಿಸಿದ್ದರಿಂದ ರಾಷ್ಟ್ರ ರಾಜಧಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದಾದ್ಯಂತ ಭದ್ರತಾ ಪಡೆಗಳು ಹಾಗೂ ದೊಣ್ಣೆ ಮತ್ತು ಕಲ್ಲು ಹಿಡಿದಿದ್ದ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ನಡುವೆ ನಿರಂತರವಾಗಿ ಸಂಘರ್ಷ ಮುಂದುವರಿದಿದೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳ ಗುಂಪುಗಳನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಹಾಗೂ ರಬ್ಬರ್ ಬುಲೆಟ್‌ಗಳನ್ನು ಸಿಡಿಸಿದ್ದರಿಂದ ನೂರಾರು ಮಂದಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ವಾಹನಗಳಿಗೆ, ಪೊಲೀಸ್ ಪೋಸ್ಟ್‌ಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಬಾಂಗ್ಲಾದೇಶದಾದ್ಯಂತ ದೂರಸಂಪರ್ಕ ಸೇವೆಗಳು ಭಾರಿ ಪ್ರಮಾಣದಲ್ಲಿ ವ್ಯತ್ಯಯಗೊಂಡಿವೆ. ಉದ್ವಿಗ್ನತೆಯನ್ನು ತಹಬಂದಿಗೆ ತರಲು ಭದ್ರತಾ ಪಡೆಗಳು ಕೆಲವು ಮೊಬೈಲ್ ಸೇವಾ ಸಂಸ್ಥೆಗಳ ದೂರ ಸಂಪರ್ಕ ಸೇವೆಯನ್ನು ಕಡಿತಗೊಳಿಸಿವೆ. ಹೀಗಿದ್ದೂ ದೇಶಾದ್ಯಂತ ಪ್ರಕ್ಷುಬ್ಧತೆ ಮುಂದುವರಿದಿದೆ.
ಮೀಸಲಾತಿ ವಿರುದ್ಧದ ಹೋರಾಟ ಕಳೆದ ತಿಂಗಳಿನಿಂದಲೇ ಪ್ರಾರಂಭಗೊಂಡಿದ್ದರೂ, ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಹೋರಾಟಗಾರರು ಹಾಗೂ ಪೊಲೀಸರು ಮತ್ತು ಸರಕಾರ ಬೆಂಬಲಿತ ಹೋರಾಟಗಾರರ ನಡುವೆ ಘರ್ಷಣೆ ನಡೆದಿದ್ದರಿಂದ ಸೋಮವಾರ ಇದು ತೀವ್ರ ಸ್ವರೂಪಕ್ಕೆ ತಿರುಗಿತು.