ಬಾಂಗ್ಲಾ | ಪ್ರತಿಭಟನೆ ಹಿಂಪಡೆಯಲು ವಿದ್ಯಾರ್ಥಿಗಳ ಗುಂಪು ನಕಾರ
ಢಾಕಾ : ಉದ್ಯೋಗ ಮೀಸಲಾತಿ ಕಡಿತಗೊಳಿಸಲು ಸುಪ್ರೀಂಕೋರ್ಟ್ ಸೂಚಿಸಿದ್ದರೂ ತಮ್ಮ ಬೇಡಿಕೆ ಸಂಪೂರ್ಣ ಈಡೇರದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಬಾಂಗ್ಲಾದೇಶದ ವಿದ್ಯಾರ್ಥಿಗಳ ಗುಂಪು ರವಿವಾರ ಹೇಳಿದೆ.
ಸರಕಾರಿ ಉದ್ಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ 30% ಮೀಸಲಿಡುವ ಸರಕಾರದ ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪು ವಿವಿಗಳ ಕ್ಯಾಂಪಸ್ ಗಳಲ್ಲಿ ಆರಂಭಿಸಿದ್ದ ಪ್ರತಿಭಟನೆ ಹಿಂಸಾಚಾರದ ರೂಪು ಪಡೆದು ದೇಶಾದ್ಯಂತ ವ್ಯಾಪಿಸಿದೆ. ಪ್ರತಿಭಟನೆ, ಹಿಂಸಾಚಾರ, ಘರ್ಷಣೆಯ ಸಂದರ್ಭ 151 ಮಂದಿ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಮೀಸಲಾತಿ ಕ್ರಮವನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, 30% ಮೀಸಲಾತಿಯನ್ನು 5%ಕ್ಕೆ ಇಳಿಸಲು ರವಿವಾರ ಸೂಚಿಸಿತ್ತು.
ಸುಪ್ರೀಂಕೋರ್ಟ್ನ ಆದೇಶ ನಮ್ಮ ಬೇಡಿಕೆಯನ್ನು ಪೂರ್ಣವಾಗಿ ಈಡೇರಿಸಿಲ್ಲ. ಆದ್ದರಿಂದ ನಮ್ಮ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು `ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಗುಂಪಿನ' ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ದೇಶದಾದ್ಯಂತ ಜಾರಿಯಲ್ಲಿರುವ ಕಫ್ರ್ಯೂ ಉಲ್ಲಂಘಿಸಿ ರವಿವಾರವೂ ದೇಶದ ಹಲವೆಡೆ ಪ್ರತಿಭಟನೆ, ರ್ಯಾಲಿ ನಡೆದಿದೆ. ಮೀಸಲಾತಿ ವಿರೋಧಿ ಮತ್ತು ಮೀಸಲಾತಿ ಪರ ವಿದ್ಯಾರ್ಥಿಗಳ ಗುಂಪಿನ ನಡುವೆ ಘರ್ಷಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸೇನೆ ಪ್ರಮುಖ ನಗರಗಳಲ್ಲಿ ಗಸ್ತು ತಿರುಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ದುಷ್ಕರ್ಮಿಗಳನ್ನು ಕಂಡಲ್ಲಿ ಗುಂಡಿಕ್ಕಲು ಆದೇಶಿಸಿರುವುದಾಗಿ ಸರಕಾರದ ಮೂಲಗಳು ಹೇಳಿವೆ.