ಬಾಂಗ್ಲಾದೇಶ | ಮುಷ್ಕರ ಕೊನೆಗೊಳಿಸಿ ಕರ್ತವ್ಯಕ್ಕೆ ಮರಳಿದ ಪೊಲೀಸರು
ಢಾಕಾ : ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಹಠಾತ್ ಪದಚ್ಯುತಿಗೆ ಕಾರಣವಾದ ವ್ಯಾಪಕ ಹಿಂಸಾಚಾರ, ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಟೀಕೆ, ಖಂಡನೆ ವ್ಯಕ್ತವಾದ ಬಳಿಕ ಮುಷ್ಕರ ನಡೆಸುತ್ತಿದ್ದ ಪೊಲೀಸರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ಜುಲೈ 1ರಿಂದ ಆರಂಭವಾಗಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ಹಿಂಸಾರೂಪಕ್ಕೆ ತಿರುಗಿದ್ದು 42 ಪೊಲೀಸ್ ಅಧಿಕಾರಿಗಳ ಸಹಿತ 450ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಕರ್ತವ್ಯದಲ್ಲಿರುವ ತಮ್ಮ ಸುರಕ್ಷತೆಯನ್ನು ಖಾತರಿ ಪಡಿಸುವವರೆಗೆ ಕೆಲಸವನ್ನು ಪುನರಾರಂಭಿಸುವುದಿಲ್ಲ ಎಂದು ಪೊಲೀಸರು ಪಟ್ಟು ಹಿಡಿದಿದ್ದರು. ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರಕಾರದ ಜತೆ ರವಿವಾರ ರಾತ್ರಿ ನಡೆದ ಮಾತುಕತೆಯ ಬಳಿಕ ಮುಷ್ಕರ ಕೈಬಿಡಲು ಪೊಲೀಸರು ಸಮ್ಮತಿಸಿದ್ದಾರೆ. ನಾವೀಗ ಸುರಕ್ಷಿತವಾಗಿರುವ ಭಾವನೆ ಮೂಡಿರುವುದರಿಂದ ಮತ್ತೆ ಕರ್ತವ್ಯಕ್ಕೆ ಮರಳಲು ಖುಷಿಯಾಗುತ್ತಿದೆ ಎಂದು ಅಸಿಸ್ಟೆಂಟ್ ಕಮಿಷನರ್ ಸ್ನೇಹಶಿಷ್ ದಾಸ್ ಹೇಳಿರುವುದಾಗಿ ಎಎಫ್ಪಿ್ ಸುದ್ದಿಸಂಸ್ಥೆ ವರದಿ ಮಾಡಿದೆ.