`ಬ್ರಿಕ್ಸ್' ವಿಸ್ತರಣೆ: ಒಮ್ಮತ ರೂಪಿಸಲು ಭಾರತದ ಮುಂದಾಳತ್ವ; ವರದಿ

Update: 2023-08-23 15:18 GMT

Photo: PTI

ಜೊಹಾನ್ಸ್‍ಬರ್ಗ್: ಐದು ಸದಸ್ಯದೇಶಗ `ಬ್ರಿಕ್ಸ್' ಸಂಘಟನೆಯನ್ನು ವಿಸ್ತರಿಸುವ ವಿಷಯದಲ್ಲಿ ಸದಸ್ಯರೊಳಗೆ ಒಮ್ಮತವನ್ನು ಕ್ರೋಢೀಕರಿಸುವ ಪ್ರಕ್ರಿಯೆಗೆ ಭಾರತ ಮುಂದಾಳತ್ವ ವಹಿಸಿದೆ ಎಂದು ಪಿಟಿಐ ಬುಧವಾರ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದ ಜೊಹಾನ್ಸ್‍ಬರ್ಗ್‍ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಮುಖಂಡರ ಶೃಂಗಸಭೆಯಲ್ಲಿ ಭಾರತ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಬ್ರೆಝಿಲ್‍ನ ಮುಖಂಡರು ಪಾಲ್ಗೊಂಡಿದ್ದರೆ ರಶ್ಯ ಮುಖಂಡ ವ್ಲಾದಿಮಿರ್ ಪುಟಿನ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡಿದ್ದಾರೆ.

`ಬ್ರಿಕ್ಸ್'ನ ವಿಸ್ತರಣೆ ಈ ಶೃಂಗಸಭೆಯ ಪ್ರಮುಖ ಅಜೆಂಡಾ ಆಗಿದ್ದು ಈ ವಿಷಯದಲ್ಲಿ ಭಾರತ ಮತ್ತು ಚೀನಾದ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ತನ್ನ ಮಿತ್ರದೇಶಗಳನ್ನು ಬ್ರಿಕ್ಸ್ ಸದಸ್ಯತ್ವಕ್ಕೆ ಸೇರ್ಪಡೆಗೊಳಿಸಲು ಚೀನಾ ಬಯಸಿದ್ದರೆ, ತನ್ನ ಕಾರ್ಯತಂತ್ರದ ಪಾಲುದಾರರನ್ನು ನೂತನ ಸದಸ್ಯರನ್ನಾಗಿ ಆಯ್ಕೆ ಮಾಡುವುದು ಭಾರತದ ಉದ್ದೇಶವಾಗಿದೆ.

ಬ್ರಿಕ್ಸ್ ನ ಸದಸ್ಯರಾಗಲು ಹಲವು ದೇಶಗಳು ಆಸಕ್ತಿ ತೋರಿದ್ದು 23 ದೇಶಗಳು ಅರ್ಜಿ ಸಲ್ಲಿಸಿವೆ. ಇದರಲ್ಲಿ ಇರಾನ್, ಸೌದಿ ಅರೆಬಿಯಾ, ಯುಎಇ ಮತ್ತು ಅರ್ಜೆಂಟೀನಾ ದೇಶಗಳು ಸದಸ್ಯತ್ವಕ್ಕೆ ಪ್ರಬಲ ಅಭ್ಯರ್ಥಿಗಳಾಗಿ ಹೊರಹೊಮ್ಮಿವೆ ಎಂದು ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿನಯ್ ಕ್ವಾತ್ರ ಹೇಳಿದ್ದಾರೆ.

ಬ್ರಿಕ್ಸ್ ವಿಸ್ತರಣೆ ಬಣ ಸೃಷ್ಟಿಗೆ ಕಾರಣವಾಗಬಾರದು: ಚೀನಾ

ಬ್ರಿಕ್ಸ್ ಸದಸ್ಯತ್ವದ ವಿಸ್ತರಣೆ ಈಗಿನ ತುರ್ತು ಅಗತ್ಯವಾಗಿದೆ. ಆದರೆ ಇದು ಬ್ರಿಕ್ಸ್‍ನೊಳಗೆ ಪ್ರತ್ಯೇಕ ಬಣ ರೂಪುಗೊಳ್ಳಲು ಕಾರಣವಾಗಬಾರದು ಎಂದು ಚೀನಾ ಹೇಳಿದೆ.

ಬ್ರಿಕ್ಸ್ ಸಂಘಟನೆಯ ವಿಸ್ತರಣೆಯ ಮೂಲಕ ಜಾಗತಿಕವಾಗಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ಚೀನಾ ಬಯಸುತ್ತಿದೆ ಎಂಬ ಪಾಶ್ಚಾತ್ಯ ಮಾಧ್ಯಮಗಳ ವರದಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಚೀನಾದ ಪ್ರತಿನಿಧಿ, ವಾಣಿಜ್ಯ ಸಚಿವ ವಾಂಗ್ ವೆಂಟಾವೊ `ಪ್ರಾಬಲ್ಯ ಸಾಧಿಸುವ ಚಾಳಿ ಚೀನಾದ ಡಿಎನ್‍ಎಯಲ್ಲಿ ಇಲ್ಲ' ಎಂದರು. ಜೊಹಾನ್ಸ್‍ಬರ್ಗ್‍ನಲ್ಲಿ ನಡೆಯುತ್ತಿರುವ ಶೃಂಗಸಭೆಯ ಚರ್ಚೆ ಯಾವುದೇ ಬಣ ರೂಪಿಸಲು ಅಥವಾ ಪ್ರಾಬಲ್ಯ ಸಾಧಿಸುವ ಉದ್ದೇಶ ಹೊಂದಿಲ್ಲ. ಬದಲಿಗೆ ಶಾಂತಿ ಮತ್ತು ಅಭಿವೃದ್ಧಿಯ ಅಜೆಂಡಾವನ್ನು ವಿಸ್ತರಿಸುವ ಉದ್ದೇಶ ಹೊಂದಿದೆ ಎಂದವರು ಹೇಳಿದ್ದಾರೆ.

2009ರಲ್ಲಿ 4 ದೇಶಗಳ ಸಂಘಟನೆಯಾಗಿ ಆರಂಭಗೊಂಡಿದ್ದ `ಬ್ರಿಕ್ಸ್'ಗೆ 2010ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಗೊಂಡಿತ್ತು.`ಜಾಗತಿಕ ದಕ್ಷಿಣ'ದ (ಪಶ್ಚಿಮದ ಹೊರಗಿನ ದೇಶಗಳನ್ನು ಉಲ್ಲೇಖಿಸುವ ವಿಶಾಲ ಪದ) ಸುಮಾರು 40ಕ್ಕೂ ಅಧಿಕ ದೇಶಗಳು ಬ್ರಿಕ್ಸ್‍ನ ಸದಸ್ಯರಾಗಲು ಆಸಕ್ತಿ ತೋರಿವೆ. `ಬ್ರಿಕ್ಸ್ ಕುಟುಂಬವು ಅದರ ಪ್ರಾಮುಖ್ಯತೆಯಲ್ಲಿ, ಅದರ ಎತ್ತರದಲ್ಲಿ ಮತ್ತು ಜಾಗತಿಕ ಪ್ರಭಾವದಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು ಇದು ತೋರಿಸಿಕೊಟ್ಟಿದೆ' ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News