ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಬುರ್ಕಿನಾ, ಮಾಲಿ ಮತ್ತು ನೈಜರ್
ಬಮಾಕೊ : ಮಾಲಿ, ಬುರ್ಕಿನಾ ಫಾಸೊ ಮತ್ತು ನೈಜರ್ ದೇಶಗಳ ಮಿಲಿಟರಿ ಮುಖಂಡರು ಶನಿವಾರ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಮಾಲಿಯ ರಾಜಧಾನಿ ಬಮಾಕೊದಲ್ಲಿ ನಡೆದ ಸಭೆಯಲ್ಲಿ ಮೂರೂ ದೇಶಗಳ ಸಚಿವರ ನಿಯೋಗ ಘೋಷಿಸಿದೆ.
`ಲಿಪ್ಟಾಕೊ-ಗೌರ್ಮ ಸನ್ನದು (ಚಾರ್ಟರ್) ಸಹೇಲ್ ದೇಶಗಳ ಒಕ್ಕೂಟವನ್ನು ಸ್ಥಾಪಿಸಿವೆ ಎಂದು ಮಾಲಿಯ ಸೇನಾಡಳಿತದ ಮುಖಂಡ ಅಸ್ಸಿಮಿ ಗೊಯಿತ ಟ್ವೀಟ್ ಮಾಡಿದ್ದಾರೆ.(ಪಶ್ಚಿಮ ಆಫ್ರಿಕಾದ ಕರಾವಳಿ ಪ್ರದೇಶದಲ್ಲಿರುವ ಮೂರು ದೇಶಗಳನ್ನು ಸಹೇಲ್ ದೇಶ ಎಂದು ಕರೆಯಲಾಗುತ್ತದೆ).
ನಮ್ಮ ಜನರ ಪ್ರಯೋಜನಕ್ಕಾಗಿ ಸಾಮೂಹಿಕ ರಕ್ಷಣೆ ಮತ್ತು ಪರಸ್ಪರ ಸಹಾಯದ ವ್ಯವಸ್ಥೆಯನ್ನು ಸ್ಥಾಪಿಸುವುದು ಇದರ ಉದ್ದೇಶ. ಈ ಮೈತ್ರಿಯು ಮೂರು ದೇಶಗಳ ನಡುವಿನ ಮಿಲಿಟರಿ ಮತ್ತು ಆರ್ಥಿಕ ಪ್ರಯತ್ನಗಳ ಸಂಯೋಜನೆಯಾಗಿದೆ. ಮೂರು ದೇಶಗಳಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಟ ನಮ್ಮ ಆದ್ಯತೆಯಾಗಿದೆ' ಎಂದು ಮಾಲಿಯ ರಕ್ಷಣಾ ಸಚಿವ ಅಬ್ದುಲ್ಲಾ ದಿಯೋಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 2012ರಲ್ಲಿ ಉತ್ತರ ಮಾಲಿಯಲ್ಲಿ ಭುಗಿಲೆದ್ದ ಭಯೋತ್ಪಾದಕರ ಚಟುವಟಿಕೆಗಳು ಬಳಿಕ 2015ರಲ್ಲಿ ನೈಜರ್ ಹಾಗೂ ಬುರ್ಕಿನಾ ಫಾಸೊಗೆ ವ್ಯಾಪಿಸಿದೆ. ಮೂರೂ ದೇಶಗಳಲ್ಲಿ 2020ರ ಬಳಿಕ ನಡೆದ ದಂಗೆಯಲ್ಲಿ ಸೇನೆ ಅಧಿಕಾರ ವಶಪಡಿಸಿಕೊಂಡಿದೆ.