ರಾಜ್ಯಸಭೆಯ ತೆರವಾದ 12 ಸ್ಥಾನಗಳಿಗೆ ಸೆ. 3ರಂದು ಚುನಾವಣೆ : ಚುನಾವಣಾ ಆಯೋಗ ಘೋಷಣೆ
ಹೊಸದಿಲ್ಲಿ : 9 ರಾಜ್ಯಗಳಲ್ಲಿ ತೆರವಾದ 12 ರಾಜ್ಯಸಭಾ ಸ್ಥಾನಗಳಿಗೆ ಸೆಪ್ಟಂಬರ್ 3ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಬುಧವಾರ ಘೋಷಿಸಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್, ಸರ್ಬಾನಂದ ಸೋನೋವಾಲ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಸೇರಿದಂತೆ ಹಾಲಿ ಸದಸ್ಯರು ಲೋಕಸಭೆಗೆ ಆಯ್ಕೆಯಾದ ಬಳಿಕ ರಾಜ್ಯ ಸಭೆಯ 10 ಸ್ಥಾನಗಳು ತೆರವಾಗಿವೆ.
ತೆಲಂಗಾಣ ಹಾಗೂ ಹಾಗೂ ಒಡಿಶಾದ 2 ರಾಜ್ಯಸಭಾ ಸ್ಥಾನಗಳಿಗೆ ಕೂಡ ಉಪ ಚುನಾವಣೆ ನಡೆಸಲಾಗುವುದು ಎಂದು ಆಯೋಗ ತಿಳಿಸಿದೆ.
ಕಾಂಗ್ರೆಸ್ ಸೇರಲು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್)ಗೆ ರಾಜೀನಾಮೆ ನೀಡಿದ ಬಳಿಕ ತೆಲಂಗಾಣದ ಕೆ. ಕೇಶವ ರಾವ್ ರಾಜ್ಯಸಭೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಬಿಜು ಜನತಾ ದಳ (ಬಿಜೆಡಿ)ದ ಸಂಸದೆ ಮಮತಾ ಮೊಹಂತಾ ತನ್ನ ರಾಜ್ಯಸಭಾ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ರಾಜ್ಯಸಭೆ ಚುನಾವಣೆಗೆ ಆಗಸ್ಟ್ 14ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದೆ.
ಪ್ರತಿ ರಾಜ್ಯ ಸಭಾ ಸ್ಥಾನಕ್ಕೆ ಸೆಪ್ಟಂಬರ್ 3ರಂದು ಪ್ರತ್ಯೇಕ ಮತದಾನ ನಡೆಸಲಾಗುವುದು. ಅದೇ ದಿನ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.