ಜಾತಿ ತಾರತಮ್ಯ ನಿಷೇಧಿಸುವ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ ಶಾಸಕಾಂಗ ಸಭೆ

Update: 2023-08-29 10:14 GMT

Photo: Twitter/@ShakSpeak

ಕ್ಯಾಲಿಫೋರ್ನಿಯಾ: ಸೋಮವಾರ ಜಾತಿ ತಾರತಮ್ಯ ನಿಷೇಧ ಮಸೂದೆಯನ್ನು ಅಂಗೀಕರಿಸುವ ಮೂಲಕ ಕ್ಯಾಲಿಫೋರ್ನಿಯಾ ಶಾಸಕಾಂಗ ಸಭೆಯು ಅಮೆರಿಕಾದಲ್ಲಿ ಅಂತಹ ಕಾಯ್ದೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯವಾಗುವುದರತ್ತ ಹೆಜ್ಜೆ ಹಾಕಿದೆ.

ಈ ಮಸೂದೆಯು 55-3 ಅಂತರದ ಭಾರಿ ಬಹುಮತದೊಂದಿಗೆ ಅಂಗೀಕಾರಗೊಂಡಿದ್ದು, ಈ ಮಸೂದೆಯನ್ನು ಇದಕ್ಕೂ ಮುನ್ನ ಅಂಗೀಕರಿಸಿ, ಸಹಮತದ ಮತದಾನಕ್ಕಾಗಿ ಕಳಿಸಿಕೊಟ್ಟಿದ್ದ ರಾಜ್ಯ ಸೆನೆಟ್ ಗೆ ಮರಳಿಸಲಾಗುತ್ತದೆ. ಸೆನೆಟ್ ನಲ್ಲಿ ಈ ಮಸೂದೆಗೆ ಅನುಮೋದನೆ ದೊರೆತ ಕೂಡಲೇ, ಅದನ್ನು ರಾಜ್ಯಪಾಲ ಗೇವಿನ್ ನ್ಯೂಸಮ್ ಅವರಿಗೆ ಕಳಿಸಿಕೊಡಲಾಗುತ್ತದೆ. ಮಸೂದೆಗೆ ನ್ಯೂಸಮ್ ಸಹಿ ಮಾಡಿದ ನಂತರ ಈ ಮಸೂದೆಯು ಕಾಯ್ದೆಯಾಗಿ ಬದಲಾಗಲಿದೆ.

ಇದಕ್ಕೂ ಮುನ್ನ, ಮಾರ್ಚ್ 23ರಂದು ಡೆಮಾಕ್ರಟಿಕ್ ಪಕ್ಷದ ರಾಜ್ಯ ಸೆನೆಟರ್ ಐಶಾ ವಹಾಬ್ ಈ ಮಸೂದೆಯನ್ನು ಕ್ಯಾಲಿಫೋರ್ನಿಯಾ ವಿಧಾನಸಭೆಯಲ್ಲಿ ಮಂಡಿಸಿದ್ದರು. ವಹಾಬ್ ರಾಜ್ಯ ಶಾಸಕಾಂಗಕ್ಕೆ ಚುನಾಯಿತರಾಗಿರುವ ಪ್ರಥಮ ಮುಸ್ಲಿಂ ಹಾಗೂ ಆಫ್ಘನ್-ಅಮೆರಿಕಾ ಸಂಜಾತ ರಾಜ್ಯ ಸೆನೆಟರ್ ಆಗಿದ್ದಾರೆ. ಜಾತಿ ತಾರತಮ್ಯವು ಸಾಮಾಜಿಕ ನ್ಯಾಯ ಹಾಗೂ ನಾಗರಿಕ ಹಕ್ಕನ್ನು ನಿರಾಕರಿಸುವ ಸಂಗತಿಯಾಗಿದೆ ಎಂದು ಈ ಮಸೂದೆಯನ್ನು ಮಂಡಿಸುವಾಗ ವಹಾಬ್ ಅಭಿಪ್ರಾಯ ಪಟ್ಟಿದ್ದರು.

ಈ ಮಸೂದೆಯು ಕ್ಯಾಲಿಫೋರ್ನಿಯಾ ಅನ್ ರೂಹ್ ಸಿವಿಲ್ ರೈಟ್ಸ್ ಆ್ಯಕ್ಟ್ ಅನ್ನು ಪರಿಷ್ಕರಿಸುವ ಗುರಿ ಹೊಂದಿದ್ದು, ಶಿಕ್ಷಣ ಹಾಗೂ ವಸತಿ ವಲಯ ಸಂಹಿತೆಯಡಿ ಜಾತಿಯನ್ನು ಸಂರಕ್ಷಿತ ವರ್ಗವೆಂದು ಸೇರ್ಪಡೆ ಮಾಡಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News