ಕೆನಡಾ: ಸಂಸದ ಚಂದ್ರ ಆರ್ಯರ ಉಮೇದುವಾರಿಕೆ ರದ್ದುಪಡಿಸಿದ ಲಿಬರಲ್ ಪಕ್ಷ

ಚಂದ್ರ ಆರ್ಯ | PC : NDTV
ಒಟ್ಟಾವ : ಪಕ್ಷದ ನಾಯಕತ್ವ ರೇಸ್ ಗೆ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಸಲ್ಲಿಸಿರುವ ಉಮೇದುವಾರಿಕೆಯನ್ನು ಕೆನಡಾದ ಲಿಬರಲ್ ಪಕ್ಷ ರದ್ದುಗೊಳಿಸಿದ್ದು, ಭಾರತ ಸರಕಾರದ ಜತೆ ಅವರು ಸಂಪರ್ಕದಲ್ಲಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
`ದಿ ಗ್ಲೋಬ್ ಆ್ಯಂಡ್ ಮೈಲ್' ವರದಿ ಪ್ರಕಾರ, ಕಳೆದ ಆಗಸ್ಟ್ನಲ್ಲಿ ಆರ್ಯ ಭಾರತಕ್ಕೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ತಮ್ಮ ಪ್ರವಾಸದ ಬಗ್ಗೆ ಅವರು ಕೆನಡಾ ಸರಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಕಾರಣಕ್ಕೆ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ವರದಿ ಹೇಳಿದೆ. ಆದರೆ ನಾಯಕತ್ವ ರೇಸ್ನಿಂದ ಮೂರು ಬಾರಿಯ ಸಂಸದ ಚಂದ್ರ ಆರ್ಯರನ್ನು ನಿಷೇಧಿಸಿರುವುದಕ್ಕೆ ಲಿಬರಲ್ ಪಕ್ಷ ಯಾವುದೇ ಕಾರಣ ನೀಡಿಲ್ಲ.
`ಖಾಲಿಸ್ತಾನ್ ತೀವ್ರವಾದದ' ವಿರುದ್ಧ ತಾನು ತಳೆದ ದೃಢ ನಿಲುವಿನ ಹಿನ್ನೆಲೆಯಲ್ಲಿ ಪಕ್ಷ ಈ ಹಠಾತ್ ನಿರ್ಧಾರ ಕೈಗೊಂಡಿದೆ ಎಂದು ಚಂದ್ರ ಆರ್ಯ ಆರೋಪಿಸಿದ್ದಾರೆ.