ಕೆನಡಾ | ಸಂಸದ ಚಂದ್ರ ಆರ್ಯಗೆ ಪನ್ನೂನ್ ಬೆದರಿಕೆ

Update: 2024-12-09 16:47 GMT

ಗುರುಪತ್ವಂತ್ ಸಿಂಗ್ ಪನ್ನೂನ್ | PC : PTI

ಒಟ್ಟಾವ : ಭಾರತದಲ್ಲಿ 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ಹಿಂಸಾಚಾರವನ್ನು ಜನಾಂಗೀಯ ಹತ್ಯೆಯೆಂದು ಘೋಷಿಸುವ ನಿರ್ಣಯವನ್ನು ವಿರೋಧಿಸಿದ್ದಕ್ಕೆ ಕೆನಡಾದ ಹಿಂದು ಸಂಸದ ಚಂದ್ರ ಆರ್ಯಗೆ ಖಾಲಿಸ್ತಾನ್ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ.

`ಲಲಿತ್ ಮಾಕನ್‍ಗೆ ಆದ ಗತಿಯೇ ಚಂದ್ರ ಆರ್ಯಗೆ ಆಗಲಿದೆ' ಎಂದು ಪನ್ನೂನ್ ಬೆದರಿಕೆ ಒಡ್ಡಿದ್ದಾನೆ. `ಕೆನಡಾ ಸಂಸತ್‍ನಲ್ಲಿ ಮಂಡಿಸಿದ್ದ ನಿರ್ಣಯವನ್ನು ನೀವು ಮಾತ್ರ ವಿರೋಧಿಸಿದ್ದೀರಿ. ಆದ್ದರಿಂದ ಖಂಡಿತವಾಗಿಯೂ ನೀವು ಮಾತ್ರ ಇದರ ಪರಿಣಾಮ ಎದುರಿಸಬೇಕು ಮತ್ತು ಕಾನೂನಿನಡಿ ಜವಾಬ್ದಾರರಾಗಬೇಕು' ಎಂದು ಪನ್ನೂನ್ ನೇತೃತ್ವದ ಸಿಖ್ಸ್ ಫಾರ್ ಜಸ್ಟಿಸ್(ಎಸ್‍ಎಫ್‍ಜೆ) ಬೆದರಿಕೆ ಒಡ್ಡಿರುವುದಾಗಿ ಚಂದ್ರ ಆರ್ಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 1984ರ ಸಿಖ್ ನರಮೇಧವನ್ನು ಸಂಘಟಿಸಿದ ಹಿಂದುಗಳನ್ನು ರಕ್ಷಿಸುವ ಮತ್ತು ನೆರವಾಗುವ ಚಂದ್ರ ಆರ್ಯರ ರಾಜಕೀಯವನ್ನು ಅಂತ್ಯಗೊಳಿಸುವಂತೆ ಎಸ್‍ಎಫ್‍ಜೆ ಖಾಲಿಸ್ತಾನ್ ಪರ ಸಿಖ್ಖರನ್ನು ಆಗ್ರಹಿಸಿದೆ.

ನಿರ್ಣಯವನ್ನು ವಿರೋಧಿಸಿದ್ದಕ್ಕೆ ಮತ್ತೊಬ್ಬ ಭಾರತೀಯ ಮೂಲದ ಸಂಸದ ಸುಖ್ ಧಲೀವಾಲ್ ಕೂಡಾ ಚಂದ್ರ ಆರ್ಯಗೆ ಬೆದರಿಕೆ ಒಡ್ಡಿರುವುದಾಗಿ ಮೂಲಗಳು ಹೇಳಿವೆ. ಕಳೆದ ವಾರ ನಿರ್ಣಯವನ್ನು ಸಂಸತ್‍ನಲ್ಲಿ ಮಂಡಿಸಿದ್ದಾಗ ಚಂದ್ರ ಆರ್ಯರ ವಿರೋಧದ ಕಾರಣ ವಿಫಲಗೊಂಡಿತ್ತು. ನಿರ್ಣಯಕ್ಕೆ ಸರ್ವಾನುಮತ ಇದ್ದರೆ ಮಾತ್ರ ಅಂಗೀಕಾರಗೊಳ್ಳುತ್ತಿತ್ತು. ಆದ್ದರಿಂದ ನಿರ್ಣಯ ವಿಫಲಗೊಂಡ ಕೂಡಲೇ ಸಂಸತ್‍ನ ಒಳಗೆಯೇ ಸಂಸದ ಧಲೀವಾಲ್ ಬೆದರಿಕೆ ಒಡ್ಡಿರುವುದಾಗಿ ಆರ್ಯ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News