ಮಾ.5ರೊಳಗೆ ಕದನ ವಿರಾಮ ಘೋಷಣೆ ಅಸಂಭವ : ಬೈಡನ್ ಸುಳಿವು
ವಾಶಿಂಗ್ಟನ್: ನೆರವು ಪೂರೈಕೆ ಕೇಂದ್ರದಲ್ಲಿ ಇಸ್ರೇಲ್ ಸೈನಿಕರು ಬುಧವಾರ ನಡೆಸಿ ಶೂಟೌಟ್ನಲ್ಲಿ ಕನಿಷ್ಠ 104 ಮಂದಿ ಮೃತಪಟ್ಟ ಘಟನೆಯು, ಸಂಧಾನ ಮಾತುಕತೆಗಳನ್ನು ಜಟಿಲಗೊಳಿಸಿದ್ದು, ಸೋಮವಾರದೊಳಗೆ ಯುದ್ಧಪೀಡಿತ ಗಾಝಾದಲ್ಲಿ ಕದನ ವಿರಾಮ ಘೋಷಣೆಯಾಗುವ ಸಾಧ್ಯತೆಯಿಲ್ಲವೆಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಹಮಾಸ್ನ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಗಾಝಾದಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಸೋಮವಾರದೊಳಗೆ ಕದನವಿರಾಮ ಜಾರಿಯಾಗುವ ಸಾಧ್ಯತೆಯಿಂದು ಬೈಡೆನ್ ಅವರು ಈ ವಾರದ ಆರಂಭದಲ್ಲಿ ಭವಿಷ್ಯ ನುಡಿದಿದ್ದರು.
ವಾಶಿಂಗ್ಟನ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ ಆ ಪ್ರದೇಶದ ನಾಯಕರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದೇನೆ. ಬಹುಃ ಕದನವಿರಾಮವು ಸೋಮವಾರದೊಳಗೆ ಏರ್ಪಡಲಾರದು. ಆದರೂ ನಾನು ಈ ಬಗ್ಗೆ ಆಶಾವಾದ ಹೊಂದಿದ್ದೇನೆ ’’ ಎಂದರು.
ಗಾಝಾ ಸಮೀಪ ಫೆಲೆಸ್ತೀನ್ ನಾಗರಿಕರ ನೆರವು ಕೇಂದ್ರದಲ್ಲಿ ಇಸ್ರೇಲ್ ಸೈನಿಕರು ನಡೆಸಿದ ಗುಂಡಿನ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ ಅಲ್ಲಿ ಏನು ನಡೆಯಿತೆಂಬುದರ ಬಗ್ಗೆ ಎರಡು ದ್ವಂದ್ವ ವರ್ತಮಾನಗಳು ಬಂದಿವೆ. ಆದರೆ ಇನ್ನೂ ಕೂಡಾ ನನ್ನ ಬಳಿಕ ಅದಕ್ಕೆ ಸಮರ್ಪಕವಾದ ಉತ್ತರ ಇಲ್ಲ’’ ಎಂದು ಬೈಡೆನ್ ಟೆಕ್ಸಾಸ್ ಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು.
ಗುರುವಾರ ಗಾಝಾದಲ್ಲಿ ನಡೆದ ನೆರವು ವಿತರಣೆ ಕೇಂದ್ರದಲ್ಲಿ ಜಮಾಯಿಸಿದ್ದ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ಸೈನಿಕರು ನಡೆಸಿದ ಗುಂಡು ಹಾರಾಟದಲ್ಲಿ ಕನಿಷ್ಠ 104 ಮಂದಿ ಸಾವನ್ನಪ್ಪಿದ್ಪರು ಹಾಗೂ 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.