ಚಿಕಾಗೊ: ಮೂವರು ಮಕ್ಕಳ ಸಹಿತ ದಂಪತಿಯ ಮೃತದೇಹ ಪತ್ತೆ
ವಾಷಿಂಗ್ಟನ್: ಅಮೆರಿಕದ ಚಿಕಾಗೊ ಉಪನಗರದ ಮನೆಯೊಂದರಲ್ಲಿ ದಂಪತಿ, ಅವರ ಮೂವರು ಪುತ್ರರು ಹಾಗೂ ಮೂರು ನಾಯಿಗಳನ್ನು ರವಿವಾರ ರಾತ್ರಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಮೃತರನ್ನು ಆಲ್ಬರ್ಟೋ ರೊಲಾನ್ ಮತ್ತವರ ಪತ್ನಿ ಝೊರೈದಾ ಬಾರ್ತೊಲೆಮಿ ಹಾಗೂ ಅವರ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ. ಈ ಕುಟುಂಬವು ಚಿಕಾಗೊದ ನೈಋತ್ಯದ ರೊಮಿಯೊವಿಲ್ ಎಂಬಲ್ಲಿ ವಾಸಿಸುತ್ತಿತ್ತು. ಸಂಬಂಧಿಯೊಬ್ಬರು ಈ ಕುಟುಂಬದ ಸದಸ್ಯರ ಮೊಬೈಲ್ ಗೆ ಕರೆಮಾಡಿದಾಗ ಯಾರೂ ಉತ್ತರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಅವರು ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಐದು ಮಂದಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿದ್ದ ಮೂರು ನಾಯಿಗಳನ್ನೂ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ಸಂಶಯವಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಶನಿವಾರ ಮಧ್ಯರಾತ್ರಿಯಿಂದ ರವಿವಾರ ಬೆಳಿಗ್ಗೆ 5 ಗಂಟೆಯ ನಡುವೆ ದುರಂತ ಸಂಭವಿಸಿದೆ ಎಂದು ರೊಮಿಯೊವಿಲ್ ಪೊಲೀಸ್ ಉಪಮುಖ್ಯಸ್ಥ ಕ್ರಿಸ್ ಬರ್ನ್ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.