‘ಬ್ರಿಕ್ಸ್' ತಕ್ಷಣ ವಿಸ್ತರಣೆಗೆ ಚೀನಾ ಪಟ್ಟು ಭಾರತ, ಬ್ರೆಝಿಲ್ ವಿರೋಧ

Update: 2023-07-28 17:10 GMT

ಬೀಜಿಂಗ್: ತನ್ನ ರಾಜಕೀಯ ಪ್ರಭಾವವನ್ನು ಹೆಚ್ಚಿಸಲು ಮತ್ತು ಅಮೆರಿಕಕ್ಕೆ ಪೈಪೋಟಿ ನೀಡುವ ಉದ್ದೇಶದಿಂದ ಚೀನಾವು ಬ್ರಿಕ್ಸ್ ಗುಂಪನ್ನು ವಿಸ್ತರಿಸಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅವಕಾಶ ನೀಡುವ ಪ್ರಸ್ತಾವ ಮುಂದಿರಿಸಿದ್ದು ಇದನ್ನು ಭಾರತ ಮತ್ತು ಬ್ರೆಝಿಲ್ ವಿರೋಧಿಸಿದೆ ಎಂದು ವರದಿಯಾಗಿದೆ.

ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದ ಜೊಹಾನ್ಸ್‍ಬರ್ಗ್‍ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಪೂರ್ವಭಾವಿಯಾಗಿ ನಡೆದ  ಸಭೆಯಲ್ಲಿ ಬ್ರಿಕ್ಸ್ ಗುಂಪನ್ನು ತಕ್ಷಣ ವಿಸ್ತರಿಸುವ ಅಗತ್ಯವಿಲ್ಲ ಎಂದು ಹಲವು ದೇಶಗಳು ಪ್ರತಿಪಾದಿಸಿದವು. ಇಂಡೊನೇಶಿಯಾ ಮತ್ತು ಸೌದಿ ಅರೆಬಿಯಾವನ್ನು ಗುಂಪಿಗೆ ಸೇರ್ಪಡೆಗೊಳಿಸುವ ಬಗ್ಗೆ ಜೊಹಾನ್ಸ್‍ಬರ್ಗ್ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಎರಡೂ ದೇಶಗಳನ್ನು ತಕ್ಷಣ ಬ್ರಿಕ್ಸ್‍ಗೆ ಸೇರ್ಪಡೆಗೊಳಿಸಬೇಕು ಎಂಬುದು ಚೀನಾದ ನಿಲುವಾಗಿದೆ. ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಸದಸ್ಯರಾಗಿರುವ ಬ್ರಿಕ್ಸ್‍ಗೆ ಸೇರ್ಪಡೆಗೊಳ್ಳಲು ಇನ್ನೂ ಕೆಲವು ದೇಶಗಳು ಆಸಕ್ತಿ ತೋರಿವೆ.

ಶೀಘ್ರದಲ್ಲೇ ಬ್ರಿಕ್ಸ್ ಗುಂಪು ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕಕ್ಕೆ ಪ್ರತಿಸ್ಪರ್ಧಿಯಾಗಲಿದೆ ಎಂಬುದು ಪಾಶ್ಚಿಮಾತ್ಯ ದೇಶಗಳ ಆತಂಕವಾಗಿದೆ. ಪಾಶ್ಚಿಮಾತ್ಯರ ವಿರೋಧ ಕಟ್ಟಿಕೊಳ್ಳಲು ಇಷ್ಟವಿಲ್ಲದ ಕಾರಣ ಬ್ರೆಝಿಲ್ ಬ್ರಿಕ್ಸ್ ನ  ವಿಸ್ತರಣೆಗೆ ಆಕ್ಷೇಪ ಮುಂದಿರಿಸಿದೆ ಎನ್ನಲಾಗಿದೆ. ಹೊಸ ಸದಸ್ಯರ ಸೇರ್ಪಡೆಗೆ ಸ್ಪಷ್ಟವಾದ ಮಾನದಂಡ ರೂಪಿಸಿದ ಬಳಿಕ ಬ್ರಿಕ್ಸ್ ವಿಸ್ತರಣೆಯಾಗಲಿ ಎಂಬುದು ಭಾರತದ ನಿಲುವಾಗಿದೆ.

ಐದೂ ದೇಶಗಳ ಸಹಮತವಿದ್ದರೆ ಮಾತ್ರ ಬ್ರಿಕ್ಸ್‍ನ ವಿಸ್ತರಣೆ ಸಾಧ್ಯವಾಗಲಿದೆ. ಆಸಕ್ತ ದೇಶಗಳಿಗೆ ಮೊದಲು ವೀಕ್ಷಕರ ಸ್ಥಾನಮಾನ ಕಲ್ಪಿಸಿ ಆ ಬಳಿಕ ನಿಯಮದ ಪ್ರಕಾರ ಸದಸ್ಯತ್ವ ನೀಡಬೇಕೆಂದು ಬ್ರೆಝಿಲ್ ಮತ್ತು ಭಾರತ ಪ್ರತಿಪಾದಿಸಿವೆ. ಅರ್ಜೆಂಟೀನಾ, ನೈಜೀರಿಯಾದಂತಹ ಅಭಿವೃದ್ಧಿಶೀಲ, ಪ್ರಜಾಪ್ರಭುತ್ವ ದೇಶಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಭಾರತ ಹೇಳಿದ್ದರೆ,   ಬ್ರಿಕ್ಸ್ ವಿಸ್ತರಣೆಗೆ ತನ್ನ ವಿರೋಧವಿಲ್ಲ. ವಿವಿಧ ದೇಶಗಳ ಸೇರ್ಪಡೆಯ ಕುರಿತ ಚರ್ಚೆಗೆ ತನ್ನ ಬೆಂಬಲವಿದೆ ಎಂದು ದಕ್ಷಿಣ ಆಫ್ರಿಕಾ ಹೇಳಿದೆ.

ಕಳೆದ ವರ್ಷದ ಬ್ರಿಕ್ಸ್ ಮುಖಂಡರ ಸಭೆಯಲ್ಲಿ ಸದಸ್ಯತ್ವ ವಿಸ್ತರಣೆಗೆ ಅನುಮೋದನೆ ಲಭಿಸಿದೆ. ಬ್ರಿಕ್ಸ್‍ಗೆ ಇನ್ನಷ್ಟು ಸದಸ್ಯರನ್ನು ಸೇರಿಸುವುದು ಐದು ಬ್ರಿಕ್ಸ್ ದೇಶಗಳ ರಾಜಕೀಯ ಒಮ್ಮತವಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ. `ಬ್ರಿಕ್ಸ್‍ನ ವಿಸ್ತರಣೆ ವಿಷಯದಲ್ಲಿ ರಶ್ಯ ಯಾವುದೇ ದೃಢ ನಿಲುವನ್ನು ಹೊಂದಿಲ್ಲ. ನಾವು ಬ್ರಿಕ್ಸ್ ವಿಸ್ತರಣೆಯ ಪರವಾಗಿದ್ದರೂ ಈ ವಿಷಯದಲ್ಲಿ ಭಾರೀ ಉತ್ಸುಕವಾಗಿಲ್ಲ.

ಇತರರ ಅಭಿಪ್ರಾಯವನ್ನೂ ಆಲಿಸಬೇಕಾಗಿದೆ. ನಾವು ಯಾವುದೇ ನಿರ್ಧಾರವನ್ನು ತಡೆಯುವುದಿಲ್ಲ' ಎಂದು ರಶ್ಯದ ರಕ್ಷಣೆ ಮತ್ತು ವಿದೇಶಾಂಗ ಕಾರ್ಯನೀತಿ ಸಮಿತಿಯ ಮುಖ್ಯಸ್ಥ ಫ್ಯೊದೋರ್ ಲುಕ್ಯನೋವ್ ಹೇಳಿದ್ದಾರೆ.

2009ರಲ್ಲಿ ಸ್ಥಾಪನೆಯಾದ ಬ್ರಿಕ್ಸ್‍ನ ಐದು ಸದಸ್ಯ ದೇಶಗಳು ವಿಶ್ವದ 42%ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು ಜಾಗತಿಕ ವ್ಯಾಪಾರದ 18%, ಜಾಗತಿಕ ಜಿಡಿಪಿಯ 23%ದಷ್ಟು ಪಾಲನ್ನು ಈ ಐದು ದೇಶಗಳು ಹೊಂದಿವೆ. ಬ್ರಿಕ್ಸ್ ಸದಸ್ಯತ್ವದ ಕ್ಷಿಪ್ರ ವಿಸ್ತರಣೆಗೆ ಚೀನಾದ ಆಗ್ರಹಕ್ಕೆ ಭಾರತ ವಿರೋಧಿಸಿದ ಬಳಿಕ ಹೊಸ ಸದಸ್ಯರ ಸೇರ್ಪಡೆಗೆ ಕರಡು ನಿಯಮಗಳನ್ನು ರೂಪಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಮುಂದಿನ ತಿಂಗಳು ನಡೆಯಲಿರುವ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News