ಭದ್ರತೆ ರಕ್ಷಿಸಲು ಇರಾನ್‍ ಗೆ ಬೆಂಬಲ : ಚೀನಾ

Update: 2024-08-11 15:23 GMT

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ (PC :NDTV)

ಬೀಜಿಂಗ್ : ತನ್ನ ಸಾರ್ವಭೌಮತ್ವ, ಭದ್ರತೆ ಮತ್ತು ರಾಷ್ಟ್ರೀಯ ಘನತೆಯನ್ನು ರಕ್ಷಿಸುವಲ್ಲಿ ಇರಾನ್‍ ಗೆ ಚೀನಾ ಬೆಂಬಲ ನೀಡುತ್ತದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿರುವುದಾಗಿ ವರದಿಯಾಗಿದೆ.

ರವಿವಾರ ಇರಾನ್ ವಿದೇಶಾಂಗ ಸಚಿವರ ಜತೆ ದೂರವಾಣಿಯ ಮೂಲಕ ಮಾತನಾಡಿದ ಚೀನಾದ ವಿದೇಶಾಂಗ ಸಚಿವರು, ಜುಲೈ 31ರಂದು ಟೆಹ್ರಾನ್‍ನಲ್ಲಿ ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್ ಅವರ ಹತ್ಯೆಯನ್ನು ಖಂಡಿಸುವುದಾಗಿ ಪುನರುಚ್ಚರಿಸಿದರು.

ಅಲ್ಲದೆ, ಈ ಆಕ್ರಮಣವು ಇರಾನ್‍ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯೊಡ್ಡಿದೆ. ಹಾನಿಯೆಹ್ ಹತ್ಯೆಯು ಗಾಝಾ ಶಾಂತಿ ಮಾತುಕತೆಯ ಪ್ರಕ್ರಿಯೆ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ದುರ್ಬಲಗೊಳಿಸಿದೆ ಎಂದು ಕಳವಳ ವ್ಯಕ್ತಪಡಿಸಿರುವುದಾಗಿ ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.

ಕಾನೂನಿಗೆ ಅನುಗುಣವಾಗಿ ತನ್ನ ಸಾರ್ವಭೌಮತ್ವ, ಭದ್ರತೆ ಮತ್ತು ರಾಷ್ಟ್ರೀಯ ಘನತೆಯನ್ನು ರಕ್ಷಿಸುವಲ್ಲಿ, ಪ್ರಾದೇಶಿಕ ಶಾಂತಿ, ಸ್ಥಿರತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳಲ್ಲಿ ಇರಾನ್‍ ಗೆ ಚೀನಾ ಬೆಂಬಲ ನೀಡುತ್ತದೆ ಹಾಗೂ ಇರಾನ್ ನೊಂದಿಗೆ ನಿಕಟ ಸಂವಹನವನ್ನು ನಿರ್ವಹಿಸಲು ಸಜ್ಜಾಗಿದೆ ಎಂದು ವಾಂಗ್ ಹೇಳಿದ್ದಾರೆ.

ಇರಾನ್ ಸಶಸ್ತ್ರ ಪಡೆಯ ಸಮರಾಭ್ಯಾಸ ಆರಂಭ

  ಇರಾನ್‍ನ ರೆವೊಲ್ಯುಷನರಿ ಗಾರ್ಡ್ ಕಾರ್ಪ್ಸ್‌ (ಐ ಆರ್‌ ಜಿ ಸಿ) ಪಡೆ ದೇಶದ ಪಶ್ಚಿಮ ಭಾಗಗಳಲ್ಲಿ ಮಿಲಿಟರಿ ಸಮರಾಭ್ಯಾಸಗಳನ್ನು ಆರಂಭಿಸಿದ್ದು ಮಂಗಳವಾರದವರೆಗೆ ಮುಂದುವರಿಯಲಿದೆ ಎಂದು ಇರಾನ್‍ನ ಅಧಿಕಾರಿಯನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಇರ್ನಾ' ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.

ಯುದ್ಧ ಸನ್ನದ್ಧತೆ ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಇರಾನ್‌ ನ ಗಡಿಯ ಸಮೀಪದಲ್ಲಿರುವ ಪಶ್ಚಿಮ ಪ್ರಾಂತದ ಕೆರ್ಮಾನ್‍ಶಾದಲ್ಲಿ ಸಮರಾಭ್ಯಾಸ ಆರಂಭಗೊಂಡಿದೆ ಎಂದು ಇರಾನ್‍ನ ಸಶಸ್ತ್ರ ಪಡೆಗಳ ಬಹುಸೇವಾ ತುಕಡಿಯಾಗಿರುವ ಐ ಆರ್‌ ಜಿ ಸಿ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಜುಲೈ 31ರಂದು ಟೆಹ್ರಾನ್‍ನಲ್ಲಿ ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್ ಹತ್ಯೆಯಾಗಿದ್ದು ಇದಕ್ಕೆ ಇಸ್ರೇಲ್ ಹೊಣೆ ಎಂದು ಆರೋಪಿಸಿರುವ ಇರಾನ್ ಮತ್ತು ಹಮಾಸ್, ಇರಾಕ್ ವಿರುದ್ಧ ಪ್ರತೀಕಾರ ದಾಳಿಯ ಪ್ರತಿಜ್ಞೆ ಮಾಡಿವೆ. ಹಾನಿಯೆಹ್ ಹತ್ಯೆ ಮಾಡಿರುವುದಕ್ಕೆ ಇಸ್ರೇಲ್ ಅನ್ನು ಕಠಿಣವಾಗಿ ಶಿಕ್ಷಿಸಬೇಕು ಎಂಬ ಸರ್ವೋಚ್ಛ ಮುಖಂಡ ಅಯತೊಲ್ಲಾ ಅಲಿ ಖಾಮಿನೈ ಅವರ ಆದೇಶವನ್ನು ಜಾರಿಗೊಳಿಸಲು ಇರಾನ್ ಸಜ್ಜುಗೊಂಡಿದೆ ಎಂದು ರೆವೊಲ್ಯುಷನರಿ ಗಾಡ್ರ್ಸ್ ಕಮಾಂಡರ್ ಶುಕ್ರವಾರ ಹೇಳಿಕೆ ನೀಡಿರುವುದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಉಲ್ಬಣಿಸುವ ಸೂಚನೆ ರವಾನಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News