ಸಿಒಪಿ ಶೃಂಗಸಭೆ: ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸಲು ವಾಗ್ದಾನ

Update: 2023-12-02 17:00 GMT

Photo- PTI

ದುಬೈ: ವಿಶ್ವದ ಇಂಧನ ಉತ್ಪಾದನೆಯಲ್ಲಿ ಪಳೆಯುಳಿಕೆ ಇಂಧನಗಳ ಪಾಲನ್ನು ಕಡಿತಗೊಳಿಸುವ ಮಾರ್ಗವಾಗಿ 2030ರ ವೇಳೆಗೆ ವಿಶ್ವದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ಶನಿವಾರ ನಡೆದ ವಿಶ್ವಸಂಸ್ಥೆಯ ಸಿಒಪಿ ಶೃಂಗಸಭೆಯಲ್ಲಿ 117 ದೇಶಗಳು ವಾಗ್ದಾನ ಮಾಡಿವೆ.

ಜಾಗತಿಕ ಹಸಿರುಮನೆ ಹೊರಸೂಸುವಿಕೆಯ ಸುಮಾರು 75%ದಷ್ಟು ಪ್ರಮಾಣದಲ್ಲಿರುವ ಇಂಧನ ವಲಯವನ್ನು ಇಂಗಾಲ ಮುಕ್ತಗೊಳಿಸುವ ಗುರಿಯನ್ನು ಹೊಂದಿರುವ ಸಿಒಪಿ ಶೃಂಗಸಭೆಯಲ್ಲಿ ಶನಿವಾರ ಹೊರಡಿಸಿದ ಘೋಷಣೆಗಳಲ್ಲಿ ಈ ವಾಗ್ದಾನವೂ ಸೇರಿದೆ. `ಪರಮಾಣು ಶಕ್ತಿಯನ್ನು ವಿಸ್ತರಿಸುವುದು, ಮಿಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸುವುದು ಮತ್ತು ಕಲ್ಲಿದ್ದಲು ಇಂಧನ ಬಳಕೆಗೆ ಲಭ್ಯವಿರುವ ಖಾಸಗಿ ಹಣಕಾಸು ಮೂಲವನ್ನು ಸ್ಥಗಿತಗೊಳಿಸುವುದು ಇತರ ಪ್ರಮುಖ ಅಂಶಗಳಾಗಿವೆ' ಎಂದು ಸಿಒಪಿ28 ಶೃಂಗಸಭೆಯ ಅಧ್ಯಕ್ಷ ಯುಎಇಯ ಸುಲ್ತಾನ್ ಅಲ್ಜಬೆರ್ ಹೇಳಿದ್ದಾರೆ.

ನವೀಕರಿಸಬಹುದಾದ ಇಂಧನಗಳ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸುವುದು 2050ರ ವೇಳೆಗೆ ಈ ಪ್ರಪಂಚದ ಇಂಧನ ವ್ಯವಸ್ಥೆಯಿಂದ ಇಂಗಾಲ ಹೊರಸೂಸುವ ಪಳೆಯುಳಿಕೆ ಇಂಧನಗಳನ್ನು ತೆಗೆದು ಹಾಕುವುದಕ್ಕೆ ಪೂರಕವಾಗಲಿದೆ ಎಂದು ಯುರೋಪಿಯನ್ ಯೂನಿಯನ್, ಅಮೆರಿಕ ಮತ್ತು ಯುಎಇ ನೇತೃತ್ವದಲ್ಲಿ ಅಂಗೀಕರಿಸಲಾದ ವಾಗ್ದಾನದಲ್ಲಿ ಉಲ್ಲೇಖಿಸಲಾಗಿದೆ. ಯುಎಇ, ಬ್ರೆಝಿಲ್, ನೈಜೀರಿಯಾ, ಆಸ್ಟ್ರೇಲಿಯಾ, ಜಪಾನ್, ಕೆನಡಾ, ಚಿಲಿ ಮತ್ತು ಬಾರ್ಬಡೋಸ್ ದೇಶಗಳು ಈ ಘೋಷಣೆಯನ್ನು ಬೆಂಬಲಿಸಿವೆ. ಆದರೆ ಭಾರತ ಮತ್ತು ಚೀನಾ 2030ರ ವೇಳೆಗೆ ನವೀಕರಿಸಬಹುದಾದ ಇಂಧನವನ್ನು ಮೂರು ಪಟ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಬೆಂಬಲಿಸಿದರೂ, ಪಳೆಯುಳಿಕೆ ಇಂಧನ ಕಡಿತ ಸೇರಿದಂತೆ ಸಂಪೂರ್ಣ ಘೋಷಣೆಯನ್ನು ಬೆಂಬಲಿಸಲಿಲ್ಲ.

ನವೀಕರಿಸಬಹುದಾದ ಇಂಧನ ಕುರಿತ ವಾಗ್ದಾನವನ್ನು ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯ ಅಂತಿಮ ನಿರ್ಣಯದಲ್ಲಿ ಸೇರಿಸಬೇಕೆಂದು 117 ದೇಶಗಳು ಬಯಸಿವೆ. ಆದರೆ ಇದಕ್ಕೆ ಸುಮಾರು 200 ದೇಶಗಳ ಸಹಮತದ ಅಗತ್ಯವಿದೆ. ಕಲ್ಲಿದ್ದಲ ಇಂಧನ ಶಕ್ತಿಯನ್ನು ಹಂತಹಂತವಾಗಿ ಕಡಿಮೆ ಮಾಡುವುದು, 2030ರ ವೇಳೆಗೆ ಇಂಧನ ದಕ್ಷತೆಯ ಜಾಗತಿಕ ದರವನ್ನು ದ್ವಿಗುಣಗೊಳಿಸುವ ಗುರಿಯನ್ನೂ ಹೊಂದಿದೆ.

ಪ್ರಪಂಚದ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ಹೊರಹಾಕಲು ಸಿಒಪಿ ಶೃಂಗಸಭೆಯಲ್ಲಿ ದೇಶಗಳ ನಡುವಿನ ಒಪ್ಪಂದದೊಂದಿಗೆ ಗುರಿಯನ್ನೂ ಜೋಡಿಸಬೇಕು ಎಂದು ಹವಾಮಾನ ದುರ್ಬಲ ದೇಶಗಳು ಆಗ್ರಹಿಸಿದವು.

ಪರಮಾಣು ಇಂಧನಕ್ಕೆ ಉತ್ತೇಜನ:

2050ರ ವೇಳೆಗೆ ಪರಮಾಣು ಶಕ್ತಿ ಸಾಮಥ್ರ್ಯವನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯೊಂದಿಗೆ 20ಕ್ಕೂ ಹೆಚ್ಚು ರಾಷ್ಟ್ರಗಳು ಶನಿವಾರ ಘೋಷಣೆಗೆ ಸಹಿ ಹಾಕಿದವು. ಹೊಸ ಪರಮಾಣು ರಿಯಾಕ್ಟರ್ಗಳನ್ನು ನಿರ್ಮಿಸದೆ ಜಗತ್ತು ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ಇತರ ಎಲ್ಲಾ ಶಕ್ತಿ ಮೂಲಗಳಿಗೆ ವ್ಯಾಪಕವಾದ ಪರ್ಯಾಯವಾಗಿದೆ ಎಂಬ ವಾದವನ್ನು ನಾವು ಮಾಡುತ್ತಿಲ್ಲ . ಆದರೆ ಪರಮಾಣು ಶಕ್ತಿಯಿಲ್ಲದೆ 2050ರ ವೇಳೆಗೆ ನಿವ್ವಳ ಶೂನ್ಯ ಸಾಧನೆ ಸುಲಭವಲ್ಲ ಎಂದು ಅಮೆರಿಕದ ಹವಾಮಾನ ಪ್ರತಿನಿಧಿ ಜಾನ್ ಕೆರ್ರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News