ಭ್ರಷ್ಟಾಚಾರ ಪ್ರಕರಣ | ಕಟಕಟೆಯಲ್ಲಿ ನಿಂತು ಕೋರ್ಟ್ ವಿಚಾರಣೆಗೆ ಎದುರಿಸಿದ ನೆತನ್ಯಾಹು
ಟೆಲ್‌ಅವೀವ್ : ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಇಸ್ರೇಲ್ ಪ್ರಧಾನಿ ಮಂಗಳವಾರ ಮೊದಲ ಬಾರಿಗೆ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ವಿಚಾರಣೆಯನ್ನು ಎದುರಿಸಿದ್ದಾರೆ.
ನ್ಯಾಯಾಧೀಶರಲ್ಲೊಬ್ಬರು ನೆತನ್ಯಾಹು ಅವರಿಗೆ ಕಟೆಕಟೆಯೊಳಗೆ ಕುಳಿತುಕೊಳ್ಳುವ ಇಲ್ಲವೇ ನಿಲ್ಲಲು ಅವಕಾಶವಿರುವುದಾಗಿ ತಿಳಿಸಿದರು. ವಂಚನೆ, ವಿಶ್ವಾಸದ್ರೋಹ ಹಾಗೂ ಲಂಚ ಸ್ವೀಕಾರ ಕುರಿತ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಂಧಿಸಿ ನೆತನ್ಯಾಹು ಅವರು ನ್ಯಾಯಾಲಯದಿಂದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ತನ್ನ ಹಾಗೂ ಕುಟುಂಬವನ್ನು ಓಲೈಸುವಂತಹ ವರದಿಗಳನ್ನು ಪ್ರಕಟಿಸುವುದಕ್ಕೆ ಪ್ರತಿಫಲವಾಗಿ ಮಾಧ್ಯಮ ಮಾಲಕರಿಗೆ ಅನುಕೂಲಕರವಾಗುವಂತಹ ಕಾನೂನು, ನಿಯಮಗಳ್ನು ಜಾರಿಗೊಳಿಸಿದ ಆರೋಪವನ್ನು ಕೂಡಾ ಅವರು ಎದುರಿಸುತ್ತಿದ್ದಾರೆ.
ಇಸ್ರೇಲ್ ಪ್ರಧಾನಿಯೊಬ್ಬರು ಕ್ರಿಮಿನಲ್ ಪ್ರತಿವಾದಿಯಾಗಿ ನ್ಯಾಯಾಲಯದ ಕಟೆಕಟೆಯಲ್ಲಿ ನಿಂತಿರುವುದು ಆ ದೇಶದ ಇತಿಹಾಸದಲ್ಲೇ ಇದು ಮೊದಲ ಸಲವಾಗಿದೆ.
ಖ್ಯಾತ ಹಾಲಿವುಡ್ ನಿರ್ಮಾಪಕರೊಬ್ಬರ ವೈಯಕ್ತಿಕ ಹಾಗೂ ಔದ್ಯಮಿಕ ಹಿತಾಸಕ್ತಿಗಳಿಗೆ ನೆರವಾಗಿದ್ದಕ್ಕಾಗಿ ಅವರಿಂದ ಸಾವಿರಾರು ಡಾಲರ್ ಬೆಲೆಬಾಳುವ ಸಿಗಾರ್‌ಗಳುಹಾಗೂ ಶಾಂಪೇನ್ ಸ್ವೀಕರಿಸಿದ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.
ಆದರೆ ತನ್ನ ಮೇಲಿನ ಆರೋಪಗಳನ್ನು ನೆತನ್ಯಾಹು ಅವರು ನಿರಾಕರಿಸಿದ್ದಾರೆ. ತನಗೆ ವಿರುದ್ಧವಾಗಿರುವ ಕೆಲವು ಮಾಧ್ಯಮಗಳು ಹಾಗೂ ಪಕ್ಷಪಾತದಿಂದ ಕೂಡಿದ ನ್ಯಾಯಾಂಗ ವ್ಯವಸ್ಥೆಯು ತನ್ನ ದೀರ್ಘಾಧಿಯ ಆಳ್ವಿಕೆಯನ್ನು ಅಂತ್ಯಗೊಳಿಸಲು ಹುಸಿಆರೋಪಗಳನ್ನು ಹೊರಿಸುತ್ತಿವೆ ಎಂದು ಅವರು ಹೇಳಿದ್ದಾರೆ.