ಗಾಝಾದಲ್ಲಿ ಮೃತಪಟ್ಟವರ ಸಂಖ್ಯೆ 1.86 ಲಕ್ಷಕ್ಕೂ ಅಧಿಕ : 'ದಿ ಲ್ಯಾನ್ಸೆಟ್' ಅಧ್ಯಯನ ವರದಿ

Update: 2024-07-13 16:56 GMT

PC : PTI 

ಗಾಝಾ : ಕಳೆದ ಅಕ್ಟೋಬರ್ ನಿಂದ ಗಾಝಾದ ಮೇಲೆ ಇಸ್ರೇಲ್ ನಡೆಸಿರುವ ನಿರಂತರ ಆಕ್ರಮಣದಲ್ಲಿ ಬಲಿಯಾದವರ ಸಂಖ್ಯೆ 38 ಸಾವಿರ ಎನ್ನಲಾಗುತ್ತಿದ್ದರೂ, ಪ್ರಕಟಿಸಲಾಗಿರುವ ಅಂಕಿಅಂಶಗಳನ್ನೂ ಮೀರಿದ ಬೇರೆಯದೇ ಸತ್ಯವೊಂದಿದೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ವೈಜ್ಞಾನಿಕ ನಿಯತಕಾಲಿಕೆ 'ದಿ ಲ್ಯಾನ್ಸೆಟ್' ಗಾಝಾದಲ್ಲಿ ನಡೆದ ಸಾವು-ನೋವುಗಳ ಅಧ್ಯಯನವನ್ನು ಪ್ರಕಟಿಸಿದೆ.

ಕಳೆದ ಅಕ್ಟೋಬರ್ ನಿಂದ ಗಾಝಾದ ಮೇಲೆ ಇಸ್ರೇಲ್ ನಡೆಸಿರುವ ನಿರಂತರ ಆಕ್ರಮಣದಲ್ಲಿ ಬಲಿಯಾದವರ ಸಂಖ್ಯೆ 38 ಸಾವಿರವೇ? ಗಾಝಾದಲ್ಲಿ ಬಲಿಯಾದವರ ಸಂಖ್ಯೆ 1,86,000ಕ್ಕಿಂತಲೂ ಅಧಿಕವಾಗಲಿದೆಯೆ? ಗಾಝಾ ನೆಲದಲ್ಲಿ ಯುದ್ಧ ತಂದಿಟ್ಟಿರುವ ಭೀಕರತೆ ಮತ್ತು ಅನಂತರದ ಪರಿಣಾಮಗಳಿಗೆ ನಿಜವಾಗಿಯೂ ಬಲಿಯಾಗಿರುವವರು ಎಷ್ಟು? ಎಂಬ ಪ್ರಶ್ನೆಗಳು ಎದ್ದಿದೆ.

ಇತ್ತೀಚಿನವರೆಗೂ, ಗಾಝಾದಲ್ಲಿ ತೀರಿಕೊಂಡವರ ಸಂಖ್ಯೆ 38,000 ಎನ್ನಲಾಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೆ, ತೀರಿಹೋದವರ ಸಂಖ್ಯೆ 1,86,000 ಇರಬಹುದು ಎಂದು ಅಂದಾಜಿಸುತ್ತಿರುವುದು ಹೇಗೆ? ಹಾಗಾಗಿ, ಸಾವಿಗೆ ಸಂಬಂಧಿಸಿದ ಅಂಕಿ-ಅಂಶಗಳು ಬಂದರೆ ಅವುಗಳನ್ನು ಅತಿ ನಿರ್ಲಿಪ್ತತೆಯಿಂದ ಕಾಣಲು ಸಾಧ್ಯವಿಲ್ಲ. ಅಲ್ಲಿ, ಇಲ್ಲವಾದ ಜೀವವೊಂದರ ಭಾವನೆಗಳನ್ನು ಕಾಣಲು ಯತ್ನಿಸಬೇಕಾಗುತ್ತದೆ.

ಕಳೆದ ವರ್ಷದ ಅಕ್ಟೊಬರ್ 7ರ ಬಳಿಕ ಗಾಝಾದಲ್ಲಿ ಯುದ್ಧದ ನೆಪದಲ್ಲಿ ಮಾನವ ಹಕ್ಕುಗಳ ನಿರಂತರ, ಘೋರ ಉಲ್ಲಂಘನೆ ನಡೆಯುತ್ತಲೇ ಬಂದಿದೆ. ಗಾಝಾ ಪಟ್ಟಿ ಒಂದು ಕಿರಿದಾದ ಪ್ರದೇಶವಾಗಿದ್ದು; ಕೇವಲ 365 ಚದರ ಕಿಮೀ ವಿಸ್ತಾರ ಹೊಂದಿದೆ. ಹೆಚ್ಚುಕಡಿಮೆ ದಿಲ್ಲಿಯ ಕಾಲುಭಾಗದಷ್ಟಿರಬಹುದು. ಇಂತಹ ಸಣ್ಣ ಪ್ರದೇಶದಲ್ಲಿ ಸುಮಾರು 23 ಲಕ್ಷ ಜನರು ವಾಸಿಸುತ್ತಿದ್ದರು. ಅಂಥಲ್ಲಿ ಕಳೆದ ಅಕ್ಟೊಬರ್ 7ರಿಂದ ಇಸ್ರೇಲ್ ನಿರಂತರ ದಾಳಿ ಮಾಡುತ್ತಾ ಬಂದಿದೆ.

ಈ ದಾಳಿಗಳಲ್ಲಿ ಗಾಝಾದ 38,000 ಜನರು ಸಾವನ್ನಪ್ಪಿದ್ಧಾರೆ ಎಂದೇ ಹೇಳುತ್ತ ಬರಲಾಗಿತ್ತು. ಅದನ್ನು ಇಸ್ರೇಲ್ ಮತ್ತು ಅಮೆರಿಕ ವಿರೋಧಿಸುತ್ತ ಬಂದಿದ್ದವು. ಅಂಕಿ-ಅಂಶಗಳನ್ನು ಉತ್ಪ್ರೇಕ್ಷೆಗೊಳಿಸಲಾಗಿದೆ ಎಂಬುದು ಅವುಗಳ ಆರೋಪವಾಗಿತ್ತು. ಆದರೆ ಕಡೆಗೆ ಇಸ್ರೇಲ್ ಗುಪ್ತಚರ ಇಲಾಖೆ ಒಪ್ಪಿಕೊಂಡಿತು. ಈಗ, ವೈಜ್ಞಾನಿಕ ನಿಯತಕಾಲಿಕೆ 'ದಿ ಲ್ಯಾನ್ಸೆಟ್' ಗಾಝಾದಲ್ಲಿ ನಡೆದ ಸಾವು-ನೋವುಗಳ ಒಂದು ಅಧ್ಯಯನವನ್ನು ಪ್ರಕಟಿಸಿದೆ.

ಅದರಲ್ಲಿ, ಯುದ್ಧ ಶುರುವಾದ ಬಳಿಕ ಗಾಝಾದಲ್ಲಿ 1,86,000ಕ್ಕಿಂತಲೂ ಅಧಿಕ ಜನರು ಪ್ರಾಣ ಕಳೆದುಕೊಂಡಿರುವುದಾಗಿ ಹೇಳಲಾಗಿದೆ. 'ದಿ ಲ್ಯಾನ್ಸೆಟ್' ಪ್ರಕಾರ ಗಾಝಾದಲ್ಲಿ ಸಂಭವಿಸಿದ ಸಾವು-ನೋವುಗಳ ಅಂಕಿ-ಅಂಶಗಳನ್ನು ಒಟ್ಟುಗೂಡಿಸುವುದು ಕಷ್ಟಕರ.

ಗಾಝಾ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ಸ್ವೀಕಾರಾರ್ಹವಲ್ಲ. ಏಕೆಂದರೆ, ಅದು ಕೇವಲ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಮತ್ತು ಮಾಧ್ಯಮಗಳಲ್ಲಿ ಹೇಳಲಾಗುತ್ತಿರುವ ಅಂಕಿ-ಅಂಶಗಳನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, ಗಾಝಾದಲ್ಲಿ ತೀರಿಹೋದವರ ಲೆಕ್ಕವೇ ಕಷ್ಟದ್ದಾಗಿದೆ.

ವಿಶ್ವಸಂಸ್ಥೆಯ ಪ್ರಕಾರ 2024ರ ಫೆಬ್ರವರಿವರೆಗೆ ಗಾಝಾದ ಸುಮಾರು ಶೇ.35 ಕಟ್ಟಡಗಳು ಧ್ವಂಸಗೊಂಡಿವೆ. ಆ ಕಟ್ಟಡಗಳ ಅವಶೇಷಗಳಡಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ಯಾರೂ ಪರಿಗಣಿಸಿಯೇ ಇಲ್ಲ. ಗಾಝಾದ ಜನಸಾಮಾನ್ಯರು ಕೇವಲ ಶಸ್ತ್ರಸಜ್ಜಿತ ಯೋಧರೊಂದಿಗೆ ಯುದ್ಧ ಮಾಡುತ್ತಿಲ್ಲ; ಶಾಲೆಗಳು, ಮನೆಗಳಲ್ಲಿ ಇರುವವರೂ ಇಸ್ರೇಲ್ ಬಾಂಬ್ ದಾಳಿಗೆ ತುತ್ತಾಗುತ್ತಿದ್ಧಾರೆ.

ಹೀಗೆ ನೇರ ಹಿಂಸಾಚಾರದಿಮದ ಸಾಯುತ್ತಿರುವವರು ಒಂದೆಡೆಯಾದರೆ, ಯುದ್ಧದ ಬಳಿಕವೂ ಹಸಿವು, ಸಾಂಕ್ರಾಮಿಕ ರೋಗಗಳು ಹೀಗೆ ಪರೋಕ್ಷ ಹಿಂಸಾಚಾರಕ್ಕೂ ಜನರು ಬಲಿಯಾಗುತ್ತಲೇ ಇದ್ದಾರೆ. ಗಾಝಾದಲ್ಲೀಗ ಆಸ್ಪತ್ರೆಯ ಸೌಲಭ್ಯವೇ ಇಲ್ಲವಾಗಿದೆ. ಸುರಕ್ಷಿತ ಪ್ರದೇಶಕ್ಕೆ ಹೋಗುವವರು ದಾರಿಯಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ವಿಶ್ವಸಂಸ್ಥೆಯ ಮಾನವೀಯ ನೆರವನ್ನು ಒದಗಿಸುವ ಸಂಘ-ಸಂಸ್ಥೆಗಳಲ್ಲಿ ಕೇವಲ ಒಂದು ಸಂಸ್ಥೆ ಗಾಝಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದನ್ನೂ ಇಸ್ರೇಲ್ ಸಹಿಸುತ್ತಿಲ್ಲ. ಆ ಸಂಸ್ಥೆಗೆ ಸಿಗುತ್ತಿರುವ ಧನಸಹಾಯವನ್ನೇ ತಡೆಯಲಾಗಿದೆ. ಹಾಗಾಗಿ, ಯುದ್ಧದಲ್ಲಿ ಆಗುತ್ತಿರುವ ನೇರ ಹಿಂಸಾಚಾರಕ್ಕಿಂತಲೂ ಹದಿನೈದು ಪಟ್ಟು ಹೆಚ್ಚು ಸಾವುಗಳು ಪರೋಕ್ಷ ಹಿಂಸಾಚಾರದಿಂದ ಸಂಭವಿಸುತ್ತಿವೆ. ನೇರ ಯುದ್ಧದಲ್ಲಿ 38,000 ಜನರು ತೀರಿಹೋದರೆ, ಪರೋಕ್ಷ ಹಿಂಸಾಚಾರದಲ್ಲಿ ಜೀವ ಕಳೆದುಕೊಂಡವರೂ ಸೇರಿ, ಬಲಿಯಾದವರ ಸಂಖ್ಯೆ 1,86,000ಕ್ಕಿಂತಲೂ ಅಧಿಕ ಎನ್ನಲಾಗುತ್ತಿದೆ.

ಜುಲೈ 10ರ ವರದಿಯ ಪ್ರಕಾರ, ಇಸ್ರೇಲಿ ಪಡೆ ಶೀಘ್ರದಲ್ಲೇ ಗಾಝಾ ತೊರೆಯುವಂತೆ ಫೆಲೆಸ್ತೀನಿಯರಿಗೆ ಎಚ್ಚರಿಸಿತ್ತು. ಅಲ್ಲಿ ಚೆಲ್ಲಾಡಿದ್ದ ಕರಪತ್ರಗಳಲ್ಲಿ, ಗಾಝಾ ಅಪಾಯಕಾರಿ ರಣರಂಗವಾಗಿ ಮಾರ್ಪಟ್ಟಿದೆ ಎಂದು ಬರೆಯಲಾಗಿತ್ತು. ಅಂಕಿ-ಅಂಶಗಳ ಪ್ರಕಾರ ಲಕ್ಷಾಂತರ ಜನಸಾಮಾನ್ಯರು ಸ್ಥಳಾಂತರಗೊಳ್ಳುವ ಹಂತದಲ್ಲೇ ಗಾಯಗೊಂಡಿದ್ದಾರೆ; ಅವರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ಬಹುತೇಕ ಫೆಲೆಸ್ತೀನಿಯರ ಮನೆಗಳು ಧ್ವಂಸಗೊಂಡಿವೆ. Palestinian Prisoner's Societyಯ ಪ್ರಕಾರ ಪಶ್ಚಿಮ ದಂಡೆ ಮತ್ತು ಪೂರ್ವ ಜೇರುಸಲೆಮ್ ನಿಂದ ಸುಮಾರು 9,600 ಫೆಲೇಸ್ತೀನಿಯರನ್ನು ಇಸ್ರೇಲಿನ ಜೈಲುಗಳಲ್ಲಿ ಬಂಧಿಸಲಾಗಿದೆ.

ಕಳೆದ ವರ್ಷ, ಯುದ್ಧ ಪ್ರಾರಂಭಿಸಲು ಬೆಂಜಮಿನ್ ನೆತನ್ಯಾಹು ಮುಖ್ಯವಾಗಿ ಎರಡು ಕಾರಣಗಳನ್ನು ಹೇಳಿದ್ದರು. ಒಂದು, ಹಮಾಸ್ ತಮ್ಮ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದು, ಇನ್ನೊಂದು, ಹಮಾಸ್ ಅನ್ನು ಸಮಗ್ರವಾಗಿ ನಾಶಗೊಳಿಸುವುದು. ಆದರೆ, ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ.

ಮೊದಮೊದಲು, ಇಸ್ರೇಲ್ ತಾನು ಉತ್ತರ ಮತ್ತು ಮಧ್ಯ ಗಾಝಾವನ್ನು ವಶಪಡಿಸಿಕೊಂಡಿರುವುದಾಗಿ ಕೊಚ್ಚಿಕೊಂಡಿತ್ತು. ಆದರೆ, ಹಮಾಸ್ ದಾಳಿಯೂ ಮುಂದುವರಿದಿತ್ತು. ಒಂದು ಅಂಶವಂತೂ ಸ್ಪಷ್ಟ. ನೆತನ್ಯಾಹು ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ, ಅವರು ಯುದ್ಧವನ್ನು ಮುಂದುವರಿಸುತ್ತಿದ್ದಾರೆ.

ಪ್ರತಿ ದೇಶಕ್ಕೆ ತನ್ನ ಸುರಕ್ಷತೆಯ ಕುರಿತು ಚಿಂತಿಸುವ ಅಧಿಕಾರವಿದೆ. ಆದರೆ, ಆ ಅಧಿಕಾರದ ದುರುಪಯೋಗ ಮಾಡಿ ಇತರರನ್ನು ಹಿಂಸಿಸುವುದು ಖಂಡನೀಯ. ಇಸ್ರೇಲ್ ತನ್ನ ಆತ್ಮರಕ್ಷಣೆಯ ನೆಪದಲ್ಲಿ ಗಾಝಾದಲ್ಲಿ ಯುದ್ಧವನ್ನಷ್ಟೇ ನಡೆಸುತ್ತಿಲ್ಲ; ಬದಲಿಗೆ, ಅದು ಯುದ್ಧಾಪರಾಧವಾಗಿದೆ.ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮುಖ್ಯ ಪ್ರಾಸಿಕ್ಯೂಟರ್ ಕರೀಂ ಖಾನ್ ಅವರು ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ರಕ್ಷಣಾ ಸಚಿವರ ವಿರುದ್ಧ ಯುದ್ಧಾಪರಾಧಕ್ಕಾಗಿ ಬಂಧನ ವಾರೆಂಟ್ ಜಾರಿಗೆ ಅಪೀಲು ಮಾಡಿದ್ದನ್ನು ಸ್ಮರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News