`ಬ್ರಿಕ್ಸ್'ಗೆ 6 ದೇಶಗಳ ಸೇರ್ಪಡೆಗೆ ನಿರ್ಧಾರ
ಜೊಹಾನ್ಸ್‍ಬರ್ಗ್: `ಬ್ರಿಕ್ಸ್'ನ ಪೂರ್ಣಪ್ರಮಾಣದ ಸದಸ್ಯರಾಗಲು 6 ರಾಷ್ಟ್ರಗಳನ್ನು ಆಹ್ವಾನಿಸಲಾಗಿದ್ದು ಮುಂದಿನ ವರ್ಷದ ಜನವರಿ 1ರಂದು ಈ ದೇಶಗಳು ಸದಸ್ಯತ್ವ ಪಡೆಯಲಿದೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಫೋಸ ಗುರುವಾರ ಹೇಳಿದ್ದಾರೆ.
`ಬ್ರಿಕ್ಸ್'ನ ಪ್ರಥಮ ಹಂತದ ವಿಸ್ತರಣೆ ಪ್ರಕ್ರಿಯೆಗೆ ಸಹಮತ ಮೂಡಿದ್ದು 2024ರ ಜನವರಿಯಿಂದ ಜಾರಿಗೆ ಬರುವಂತೆ ಈಜಿಪ್ಟ್, ಇಥಿಯೋಪಿಯಾ, ಇರಾನ್, ಅರ್ಜೆಂಟೀನಾ, ಯುಎಇ ಮತ್ತು ಸೌದಿ ಅರೆಬಿಯಾ ದೇಶಗಳು `ಬ್ರಿಕ್ಸ್'ನ ನೂತನ ಸದಸ್ಯರಾಗಲಿವೆ. ಇನ್ನೂ ಕೆಲವು ರಾಷ್ಟ್ರಗಳು ಸದಸ್ಯತ್ವಕ್ಕೆ ಆಸಕ್ತಿ ತೋರಿದ್ದು ಈ ಬಗ್ಗೆ ನಮ್ಮ ವಿದೇಶಾಂಗ ಸಚಿವರು ಗಮನ ಹರಿಸಲಿದ್ದಾರೆ ಎಂದವರು ಹೇಳಿದ್ದಾರೆ.
ಇದೇ ಸಂದರ್ಭ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ `ನೂತನ ಸದಸ್ಯರನ್ನು ಬ್ರಿಕ್ಸ್‍ಗೆ ಸ್ವಾಗತಿಸುತ್ತೇನೆ. ಇದು ಸಹಕಾರ ಮತ್ತು ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡುವ ವಿಶ್ವಾಸವಿದೆ' ಎಂದರು.
`ಬ್ರಿಕ್ಸ್'ನ ಪೂರ್ಣಪ್ರಮಾಣದ ಸದಸ್ಯತ್ವ ಕೋರಿ 20ಕ್ಕೂ ಹೆಚ್ಚು ದೇಶಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದು, ಸದಸ್ಯತ್ವ ವಿಸ್ತರಣೆ ದಕ್ಷಿಣ ಆಫ್ರಿಕಾದಲ್ಲಿ ಈಗ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಪ್ರಮುಖ ಅಜೆಂಡಾದಲ್ಲಿ ಒಂದಾಗಿದೆ.