ಪುತ್ರರಿಗೆ ವಾಟ್ಸ್ಯಾಪ್ ಕರೆ ಮಾಡಲು ಇಮ್ರಾನ್ ಗೆ ಅನುಮತಿ ನಿರಾಕರಣೆ
ರಾವಲ್ಪಿಂಡಿ: ತನ್ನ ಪುತ್ರರಿಗೆ ವಾರಕ್ಕೊಮ್ಮೆ ವಾಟ್ಸ್ಯಾಪ್ ಕರೆ ಮಾಡಲು ಅವಕಾಶ ನೀಡಬೇಕೆಂದು ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಾರ್ಟಿ(ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ ಅವರ ಕೋರಿಕೆಯನ್ನು ರಾವಲ್ಪಿಂಡಿ ನ್ಯಾಯಾಲಯ ಸೋಮವಾರ ತಿರಸ್ಕರಿಸಿರುವುದಾಗಿ ಎಆರ್ಐ ನ್ಯೂಸ್ ವರದಿ ಮಾಡಿದೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧನದಲ್ಲಿರುವ ಇಮ್ರಾನ್ ಖಾನ್ ತನ್ನ ಪುತ್ರರೊಂದಿಗೆ ವಾರಕ್ಕೊಮ್ಮೆ ವಾಟ್ಸ್ಯಾಪ್ ಕರೆ ಮಾಡಿ ಮಾತನಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೈದಿಗೆ ತನ್ನ ಬಂಧುಗಳ ಜತೆ ವಾಟ್ಸ್ಯಾಪ್ ನಲ್ಲಿ ಸಂವಹನ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಜೈಲಿನ ಆಡಳಿತ ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು.
ಇಮ್ರಾನ್ ಖಾನ್ ಅವರ ಮಕ್ಕಳು ತಮ್ಮ ತಾಯಿ ಜೆಮಿಮಾ ಖಾನ್ ಜತೆ ಲಂಡನ್ನನಲ್ಲಿ ನೆಲೆಸಿದ್ದಾರೆ. ಮಕ್ಕಳ ಜತೆ ತಿಂಗಳಿಗೆ ಎರಡು ಸಾರಿ ಮಾತನಾಡಲು ಇದಕ್ಕೂ ಮುನ್ನ ನ್ಯಾಯಾಲಯ ಅನುಮತಿಸಿತ್ತು. ಆದರೆ ಮಕ್ಕಳ ಜತೆ ಟೆಲಿಫೋನ್ ನಲ್ಲಿ ಮಾತನಾಡಲು ಅವಕಾಶ ನೀಡಬೇಕೆಂದು ಇಮ್ರಾನ್ ಮನವಿ ಮಾಡಿದ್ದರು.