ಅರಿರೆನಾದಲ್ಲೂ ಟ್ರಂಪ್ ಜಯಭೇರಿ

Update: 2024-11-10 16:52 GMT

ಡೊನಾಲ್ಡ್ ಟ್ರಂಪ್ | PC : PTI

ವಾಶಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅರಿರೆನಾ ರಾಜ್ಯದ ಮತಏಣಿಕೆ ಶನಿವಾರ ಪೂರ್ಣಗೊಂಡಿದ್ದು, ಅಲ್ಲಿನ 11 ಸ್ಥಾನಗಳಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಚುನಾವಣೆಯಲ್ಲಿ ನಿರ್ಣಾಯಕವಾದ ಎಲ್ಲಾ ಏಳು ರಾಜ್ಯಗಳಲ್ಲಿಯೂ ಟ್ರಂಪ್ ಮೇಲುಗೈ ಸಾಧಿಸಿದಂತಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನೂತನ ಸ್ಥಾನ ಬಲಾಬಲಗಳ ಪ್ರಕಾರ ಟ್ರಂಪ್ ಒಟ್ಟು 312 ಸ್ಥಾನಗಳನ್ನು ಗೆದಿದ್ದು, ಸ್ಪಷ್ಟ ಬಹುಮತ ಗಳಿಸಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು 304 ಸ್ಥಾನಗಳಲ್ಲಿ ಜಯಗಳಿಸಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳ ಸಂಖ್ಯೆ 270 ಆಗಿದೆ.

ಫಲಿತಾಂಶವನ್ನೇ ಅದಲು ಬದಲು ಮಾಡುವ ಸಾಮರ್ಥ್ಯವಿರುವ ರಾಜ್ಯಗಳಾದ ಜಾರ್ಜಿಯಾ, ಪೆನ್ಸಿಲ್ವೇನಿಯಾ, ಮಿಶಿಗನ್ ಹಾಗೂ ವಿಸ್ಕೊನ್ಸಿನ್ ಸೇರಿದಂತೆ ಅಮೆರಿಕದ 50 ರಾಜ್ಯಗಳ ಪೈಕಿ ಅರ್ಧಾಂಶಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆಯನ್ನು ಸಾಧಿಸಿದ್ದರು. ಜಿದ್ದಾಜಿದ್ದಿಯ ಸ್ಪರ್ಧೆಯೇರ್ಪಟ್ಟಿದ್ದ ಉತ್ತರ ಕರೋಲಿನಾ ಹಾಗೂ ನೆವಾಡ ಕೂಡಾ ಟ್ರಂಪ್ ಪಾಲಾಗಿದೆ.

ಎದುರಾಳಿ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೇವಲ 226 ಸ್ಥಾನಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಜನವರಿ 20ರಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಟ್ರಂಪ್ ಅವರ ಚುನಾವಣಾ ಪಚಾರ ಮ್ಯಾನೇಜರ್ ಆಗಿದ್ದ ಸೂಸಿ ವೈಲ್ಸ್ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಟ್ರಂಪ್ ಸಂಪುಟದಲ್ಲಿ ಮಸ್ಕ್, ಕೆನಡಿ?

ಟ್ರಂಪ್ ಸರಕಾರದಲ್ಲಿ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಎಲನ್ ಮಸ್ಕ್ ಅವರಿಗೂ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಅಮೆರಿಕದ ಮಾಜಿ ಜರ್ಮನ್ ರಾಯಭಾರಿ ರಿಕ್ ಗ್ರೆನೆಲಿ ವಿದೇಶಾಂಗ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನೋರ್ವ ಪ್ರಮುಖ ರಾಜಕಾರಣಿ ರಾಬರ್ಟ್ ಕೆನಡಿ ಜೂನಿಯರ್ ಅವರಿಗೆ ಆರೋಗ್ಯ ಇಲಾಖೆಯನ್ನು ನೀಡುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News