"ಮಣಿಪುರಕ್ಕೆ ಪ್ರಯಾಣಿಸಬೇಡಿ": ಭಾರತದ ಪ್ರಯಾಣಕ್ಕೆ ಪರಿಷ್ಕೃತ ಸಲಹಾ ಸೂಚಿ ಬಿಡುಗಡೆ ಮಾಡಿದ ಅಮೆರಿಕ
ವಾಷಿಂಗ್ಟನ್: ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಭಾರತ-ಪಾಕಿಸ್ತಾನ ಗಡಿ ಹಾಗೂ ನಕ್ಸಲೀಯರು ಸಕ್ರಿಯರಾಗಿರುವ ಕೇಂದ್ರ ಮತ್ತು ಪೂರ್ವ ಭಾರತದ ಪ್ರದೇಶಗಳಿಗೆ ಪ್ರಯಾಣ ಬೆಳೆಸಬೇಡಿ ಎಂದು ತನ್ನ ದೇಶದ ಪ್ರಜೆಗಳಿಗೆ ಅಮೆರಿಕಾ ಸಲಹಾ ಸೂಚಿ ಬಿಡುಗಡೆ ಮಾಡಿದೆ.
“ಭಾರತದಲ್ಲಿ ಅಪರಾಧ ಹಾಗೂ ಭಯೋತ್ಪಾದನೆ ಹೆಚ್ಚಳಗೊಂಡಿರುವುದರಿಂದ ತೀವ್ರ ಎಚ್ಚರಿಕೆಯನ್ನು ವಹಿಸಿ” ಎಂದು ಆ ಸಲಹಾ ಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆಯಾಗಿ ಭಾರತವನ್ನು ಎರಡನೆ ಹಂತದಲ್ಲಿ ಇಡಲಾಗಿದೆ. ಆದರೆ, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಭಾರತ-ಪಾಕಿಸ್ತಾನ ಗಡಿ ಹಾಗೂ ಕೇಂದ್ರ ಮತ್ತು ಪೂರ್ವ ಭಾರತದ ಕೆಲವು ಭಾಗಗಳನ್ನು ನಾಲ್ಕನೆಯ ಹಂತದಲ್ಲಿರಿಸಲಾಗಿದೆ.
“ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ(ಪೂರ್ವ ಲಡಾಖ್ ಹಾಗೂ ಅದರ ರಾಜಧಾನಿ ಲೇಹ್ ಅನ್ನು ಹೊರತುಪಡಿಸಿ) ಭಯೋತ್ಪಾದನೆ ಹಾಗೂ ನಾಗರಿಕ ದಂಗೆಗಳು ಇರುವುದರಿಂದ, ಭಾರತ-ಪಾಕಿಸ್ತಾನದ 10 ಕಿಮೀ ಗಡಿಯೊಳಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಘರ್ಷ ಸಾಧ್ಯತೆ ಇರುವುದರಿಂದ, ಕೇಂದ್ರ ಮತ್ತು ಪೂರ್ವ ಭಾರತದಲ್ಲಿ ಭಯೋತ್ಪಾದನೆ ಇರುವುದರಿಂದ ಹಾಗೂ ಮಣಿಪುರದಲ್ಲಿ ಹಿಂಸಾಚಾರ ಮತ್ತು ಅಪರಾಧಗಳಿರುವುದರಿಂದ ಈ ಪ್ರದೇಶಗಳಿಗೆ ಪ್ರಯಾಣಿಸಬೇಡಿ” ಎಂದು ಅಮೆರಿಕ ರಾಜ್ಯ ಇಲಾಖೆಯ ಸಲಹಾ ಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದರೊಂದಿಗೆ ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರಗಳಿರುವುದರಿಂದ ಅಲ್ಲಿನ ಪ್ರವಾಸವನ್ನು ಮರು ಪರಿಶೀಲಿಸಿ ಎಂದೂ ಸಲಹೆ ನೀಡಲಾಗಿದೆ.
“ಅತ್ಯಾಚಾರವು ಭಾರತದಲ್ಲಿ ಕ್ಷಿಪ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ಅಪರಾಧಗಳ ಪೈಕಿ ಒಂದು ಎಂದು ಭಾರತೀಯ ಪ್ರಾಧಿಕಾರಗಳು ಹೇಳುತ್ತಿವೆ. ಪ್ರವಾಸಿ ತಾಣಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯದಂತಹ ಹಿಂಸಾಪೀಡಿತ ಅಪರಾಧಗಳು ನಡೆದಿವೆ. ಯಾವುದೇ ಮುನ್ಸೂಚನೆ ಇಲ್ಲದೆ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ. ಅವರು ಪ್ರವಾಸಿ ತಾಣಗಳು, ಸಾರಿಗೆ ನಿಲ್ದಾಣಗಳು, ಮಾರುಕಟ್ಟೆ/ಶಾಪಿಂಗ್ ಮಾಲ್‌ಗಳು ಹಾಗೂ ಸರಕಾರಿ ಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ಪ್ರಯಾಣ ಸಲಹಾ ಸೂಚಿಯಲ್ಲಿ ಹೇಳಲಾಗಿದೆ.