ಪಶ್ಚಿಮದಂಡೆಯಲ್ಲಿ ಇಸ್ರೇಲ್‌ನಿಂದ ಡ್ರೋನ್ ದಾಳಿ: 8 ಫೆಲೆಸ್ತೀನಿಯರ ಮೃತ್ಯು
ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ನಗರದಲ್ಲಿ ಇಸ್ರೇಲ್ ಪಡೆ ಸೋಮವಾರ ಬೆಳಗ್ಗೆ ಡ್ರೋನ್ ಮೂಲಕ ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಟ 8 ಫೆಲೆಸ್ತೀನೀಯರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್‌ನ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ಈ ಮಧ್ಯೆ, ಇಸ್ರೇಲ್ ಪಶ್ಚಿಮದಂಡೆಯಲ್ಲಿ ಬೃಹತ್ ಪ್ರಮಾಣದಲ್ಲಿ ಸೇನಾಪಡೆಯನ್ನು ಜಮಾವಣೆಗೊಳಿಸುತ್ತಿದ್ದು ಮತ್ತೊಂದು ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿರುವ ಸೂಚನೆಯಾಗಿದೆ ಎಂದು ಸಚಿವಾಲಯ ಹೇಳಿದೆ.
ಜೆನಿನ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಉಗ್ರರ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್‌ನ ಮಿಲಿಟರಿ ಹೇಳಿದ್ದರೆ, ಇಸ್ರೇಲ್ ಸೇನೆ ಪ್ರಯೋಗಿಸಿದ ಕ್ಷಿಪಣಿ ಮನೆಯೊಂದಕ್ಕೆ ಅಪ್ಪಳಿಸಿ ಧ್ವಂಸಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಜೆನಿನ್‌ನಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಯೋಧರು ಸೋಮವಾರ ಮಧ್ಯಾಹ್ನದವರೆಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಶಿಬಿರವಿರುವ ಪ್ರದೇಶದ ರಸ್ತೆಗಳಲ್ಲಿ ಗುಂಡು ಹಾರಾಟದ ಸದ್ದು, ಡ್ರೋನ್ ಹಾರಾಟದ ಸದ್ದು ಕೇಳಿಬರುತ್ತಿದ್ದು ಕೆಲವು ಶಿಬಿರಗಳಲ್ಲಿ ದಟ್ಟ ಹೊಗೆ ಆವರಿಸಿದೆ. ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದ್ದು ಕಿರಿದಾದ ರಸ್ತೆಗಳ ಮೂಲಕ ಬುಲ್ಡೋಝರ್‌ಗಳು ಹಾದುಹೋದಾಗ ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಕಾರ್ಯಾಚರಣೆ ಯೋಜಿತ ರೀತಿಯಲ್ಲಿ ಮುಂದುವರಿದಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹೇಳಿದ್ದಾರೆ.ಸುಮಾರು 2000ದಷ್ಟು ಯೋಧರಿರುವ ತುಕಡಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಯೋಧರ ಮುನ್ನಡೆಗೆ ಇರುವ ತೊಡಕನ್ನು ನಿವಾರಿಸಲು ಡ್ರೋನ್‌ಗಳ ಮೂಲಕ ಸರಣಿ ದಾಳಿ ನಡೆಸಲಾಗಿದೆ ಎಂದು ಸೇನೆಯ ವಕ್ತಾರ ಲೆಕ ರಿಚರ್ಡ್ ಹೆಚ್ಟ್ ಪ್ರತಿಕ್ರಿಯಿಸಿದ್ದಾರೆ
ವ್ಯಾಪಕ ಖಂಡನೆ
ಇಸ್ರೇಲ್ ಸೇನೆ ನಡೆಸುತ್ತಿರುವ ಹಿಂಸಾಚಾರವನ್ನು ಫೆಲೆಸ್ತೀನ್, ನೆರೆದೇಶಗಳಾದ ಜೋರ್ಡಾನ್ ಮತ್ತು ಈಜಿಪ್ಟ್ ಹಾಗೂ 57 ದೇಶಗಳು ಸದಸ್ಯತ್ವ ಹೊಂದಿರುವ ‘ಇಸ್ಲಾಮಿಕ್ ಸಹಕಾರ ಸಂಘಟನೆ’ (ಐಸಿಒ) ಖಂಡಿಸಿದೆ. ಇಸ್ರೇಲಿ ಆಕ್ರಮಣ ಪಡೆಗಳ ದಾಳಿಯನ್ನು ಖಂಡಿಸುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಹೇಳಿದೆ. 2020ರಲ್ಲಿ ಯುಎಇ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಬಾಂಧವ್ಯವನ್ನು ಮರುಸ್ಥಾಪಿಸಲಾಗಿದೆ.