ಗಾಝಾ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 22 ಮಂದಿ ಮೃತ್ಯು
ಗಾಝಾ : ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಒಪ್ಪಂದದ ಬಗ್ಗೆ ಪ್ರಯತ್ನ ಮುಂದುವರಿದಿರುವ ನಡುವೆಯೇ ಬುಧವಾರ ಗಾಝಾ ಪಟ್ಟಿಯಾದ್ಯಂತ ಇಸ್ರೇಲಿ ಮಿಲಿಟರಿ ನಡೆಸಿದ ದಾಳಿಯಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿರುವುದಾಗಿ ಗಾಝಾ ಆರೋಗ್ಯ ಇಲಾಖೆ ಹೇಳಿದೆ.
ಗಾಝಾ ನಗರದ ಬಳಿಯಿರುವ ಶೇಖ್ ರದ್ವಾನ್‍ನಲ್ಲಿರುವ ಬಹುಮಹಡಿ ಕಟ್ಟಡದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದರೆ, ಝೀಟೌನ್ ನಗರದಲ್ಲಿ ನಡೆದ ದಾಳಿಯಲ್ಲಿ ಐದು ಮಂದಿ ಮೃತರಾಗಿದ್ದಾರೆ. ಸಾವಿರಾರು ಫೆಲೆಸ್ತೀನಿಯನ್ನರು ಆಶ್ರಯ ಪಡೆದಿರುವ ಮಧ್ಯ ಗಾಝಾದ ದೇರ್ ಅಲ್-ಬಲಾಹ್ ನಗರದಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಮೂರು ವಾರಗಳಿಂದಲೂ ಇಸ್ರೇಲ್ ಸೇನೆ ಕಾರ್ಯಾಚರಣೆ ನಡೆಸುತ್ತಿರುವ ಜಬಾಲಿಯಾದಲ್ಲಿ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇಸ್ರೇಲ್ ನ ಬಾಂಬ್‍ದಾಳಿ ಮುಂದುವರಿದಿರುವಂತೆಯೇ ಗಾಝಾದಲ್ಲಿ ಕದನ ವಿರಾಮ ಒಪ್ಪಂದಕ್ಕಾಗಿ ನಡೆಸುತ್ತಿರುವ ಪ್ರಯತ್ನಗಳನ್ನು ಅಮೆರಿಕ, ಖತರ್ ಮತ್ತು ಈಜಿಪ್ಟ್ ತೀವ್ರಗೊಳಿಸಿದೆ. ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅಧಿಕಾರದಿಂದ ಕೆಳಗಿಳಿಯುವ ಜನವರಿ 20 ಕದನ ವಿರಾಮ ಅಂತಿಮಗೊಳಿಸಲು ಅನಧಿಕೃತ ಗಡುವು ಎಂದು ನಿರ್ಧರಿಸಲಾಗಿದ್ದು ಈ ಅವಧಿಯೊಳಗೆ ಒಪ್ಪಂದ ಅಂತಿಮಗೊಳಿಸುವ ಉದ್ದೇಶವಿದೆ ಎಂದು ಮೂಲಗಳು ಹೇಳಿವೆ.