ಇಸ್ರೇಲಿ ಪ್ರವಾಸಿಗರ ಕಾನೂನುಬಾಹಿರ ಚಟುವಟಿಕೆ ಮೇಲೆ ಶಿಸ್ತುಕ್ರಮ: ಶ್ರೀಲಂಕಾ
ಕೊಲಂಬೊ : ಇಸ್ರೇಲಿ ಪ್ರವಾಸಿಗರು ಕಾನೂನುಬಾಹಿರ ಚಟುವಟಿಕೆ ನಡೆಸಿರುವ ವರದಿಯಿದ್ದು ಈ ಬಗ್ಗೆ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಶ್ರೀಲಂಕಾದ ಪ್ರಧಾನಿ ಬುಧವಾರ ಹೇಳಿದ್ದಾರೆ.
ಕಳೆದ ವರ್ಷ ಶ್ರೀಲಂಕಾಕ್ಕೆ ಆಗಮಿಸಿದ್ದ ಇಸ್ರೇಲಿ ಪ್ರವಾಸಿಗರು ಕಾನೂನುಬಾಹಿರ ಚಟುವಟಿಕೆ ನಡೆಸಿರುವ ಸರಣಿ ದೂರಿನ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸುರಿಯ ಬುಧವಾರ ಸಂಸತ್ ನಲ್ಲಿ ಘೋಷಿಸಿದ್ದಾರೆ. ಇಸ್ರೇಲಿ ಪ್ರಜೆಗಳಿಗೆ ಧಾರ್ಮಿಕ ಪ್ರಾರ್ಥನಾ ಮಂದಿರ ಅಥವಾ ಅದಕ್ಕೆ ಸಂಬಂಧಿಸಿದ ಕಟ್ಟಡಗಳನ್ನು ನಿರ್ಮಿಸಲು ಶ್ರೀಲಂಕಾ ಅಧಿಕಾರಿಗಳು ಯಾವುದೇ ಅನುಮತಿ ನೀಡಿಲ್ಲ. ಇಂತಹ ಪ್ರಕ್ರಿಯೆಗಳನ್ನು ತಡೆಯಲು ಸರಕಾರ ಸಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದವರು ಹೇಳಿದ್ದಾರೆ.
2024ರಲ್ಲಿ ಒಟ್ಟು 25,514 ಇಸ್ರೇಲಿ ಪ್ರಜೆಗಳು ಶ್ರೀಲಂಕಾಕ್ಕೆ ಭೇಟಿ ನೀಡಿರುವುದಾಗಿ ಸರಕಾರದ ಅಂಕಿ ಅಂಶ ತಿಳಿಸಿದೆ. ಆಗ್ನೇಯ ಕರಾವಳಿಯಲ್ಲಿರುವ ಅರುಗಮ್ ಕೊಲ್ಲಿ ಅವರ ನೆಚ್ಚಿನ ಪ್ರವಾಸೀ ತಾಣವಾಗಿದೆ. ಈ ಪ್ರದೇಶದಲ್ಲಿ ಇಸ್ರೇಲಿ ವ್ಯವಹಾರಗಳು ಕ್ರಮೇಣ ಹೆಚ್ಚುತ್ತಿದೆ ಹಾಗೂ ಇಲ್ಲಿ `ಚಬಾದ್ ಹೌಸ್' ಎಂದು ಕರೆಯಲಾಗುವ ಯೆಹೂದಿ ಸಮುದಾಯ ಕೇಂದ್ರ ಮತ್ತು ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದರು.
ಇದನ್ನು ಸಮಸ್ಯೆಯೆಂದು ಗುರುತಿಸಲಾಗಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ವ್ಯವಹಾರ ಮತ್ತು ಚಟುವಟಿಕೆಗಳನ್ನು ನಡೆಸಲು ಇಸ್ರೇಲಿಗಳಿಗೆ ವೀಸಾ ಒದಗಿಸಲಾಗಿಲ್ಲ. ದೇಶದ ಕಾನೂನನ್ನು ಉಲ್ಲಂಘಿಸಿ ಅವರು ಈ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.