ರಶ್ಯದ 38 ಅಂತಸ್ತಿನ ವಸತಿ ಸಂಕೀರ್ಣಕ್ಕೆ ಉಕ್ರೇನ್ ಡ್ರೋನ್ ದಾಳಿ!
ಮಾಸ್ಕೊ: ರಶ್ಯದ ಪ್ರಾಂತೀಯ ರಾಜ್ಯಪಾಲರ ಪ್ರಕಾರ, ಸೋಮವಾರ ನಡೆದ ಉಕ್ರೇನ್ ಡ್ರೋನ್ ದಾಳಿಯಲ್ಲಿ ರಶ್ಯದ ಸರಟೋವ್ ಪ್ರಾಂತ್ಯದ ಎರಡು ಮುಖ್ಯ ನಗರಗಳಲ್ಲಿನ ಮನೆಗಳು ಹಾನಿಗೀಡಾಗಿದ್ದು, ಓರ್ವ ಮಹಿಳೆ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಟೆಲಿಗ್ರಾಮ್ ನಲ್ಲಿ ಮಾಹಿತಿ ನೀಡಿರುವ ಪ್ರಾಂತೀಯ ರಾಜ್ಯಪಾಲ ರೋಮನ್ ಬಸುರ್ಗಿನ್, ಡ್ರೋನ್ ದಾಳಿಯಲ್ಲಿ ಹಾನಿಗೀಡಾದ ಸರಟೋವ್ ನ ವಸತಿ ಸಂಕೀರ್ಣವೊಂದರ ಅವಶೇಷಗಳು ಕುಸಿದು ಬಿದ್ದಿದ್ದರಿಂದ, ರಶ್ಯದ ವಾಯು ರಕ್ಷಣಾ ವ್ಯವಸ್ಥೆಯು ನಾಶವಾಗಿದೆ ಎಂದು ಹೇಳಿದ್ದಾರೆ.
ಟೆಲಿಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊದಲ್ಲಿ, ಸರಟೋವ್ ನ ಬಹು ಅಂತಸ್ತಿನ ಕಟ್ಟಡದ ಭಾಗವೊಂದು ಹಾನಿಗೀಡಾಗಿದ್ದು, ಮೂರು ಅಂತಸ್ತಿನ ಹಲವಾರು ಕಿಟಕಿಗಳು ಹಾರಿ ಹೋಗಿರುವುದು ಕಂಡು ಬಂದಿದೆ. ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿರುವ ಮತ್ತೊಂದು ವಿಡಿಯೊದಲ್ಲಿ ಡ್ರೋನ್ ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಆದರೆ, ಈ ವಿಡಿಯೊದ ನೈಜತೆ ಇನ್ನೂ ದೃಢಪಟ್ಟಿಲ್ಲ ಎಂದು ವರದಿಯಾಗಿದೆ.