ಯುರೋಪ್ ಶಾಲೆಗಳಲ್ಲಿ ಮೊಬೈಲ್ ಫೋನ್ ನಿಷೇಧಕ್ಕೆ ಚಿಂತನೆ
ಬ್ರಸೆಲ್ಸ್ : ಯುವಜನರಲ್ಲಿ ಮೊಬೈಲ್ ಫೋನ್, ಸಾಮಾಜಿಕ ಮಾಧ್ಯಮಗಳು ಮತ್ತು ಇತರ ರೀತಿಯ ಡಿಜಿಟಲ್ ಸಂವಹನಗಳ ಅತಿಯಾದ ಬಳಕೆಯ ಬಗ್ಗೆ ಯುರೋಪಿಯನ್ ರಾಷ್ಟ್ರಗಳಲ್ಲಿ ಕಳವಳ ಹೆಚ್ಚುತ್ತಿದ್ದು ಕೆಲವು ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್‍ಗಳನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆಸಿವೆ ಎಂದು ವರದಿಯಾಗಿದೆ.
ಮೊಬೈಲ್ ಫೋನ್‍ಗಳ ಮಿತಿಮೀರಿದ ಬಳಕೆಯು ಮಕ್ಕಳು ಮತ್ತು ಯುವಜನರ ಮಾನಸಿಕ ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವುದಾಗಿ ಇತ್ತೀಚಿನ ಅಧ್ಯನಯಗಳು ಎತ್ತಿತೋರಿಸಿವೆ. `ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿನ ಸಂಘಟನೆ(ಒಇಸಿಡಿ) ನಡೆಸಿದ ಅಧ್ಯಯನವು ಶಾಲೆಗಳಲ್ಲಿ ಮೊಬೈಲ್ ಫೋನ್‍ಗಳ ಸೀಮಿತ ಮತ್ತು ಜವಾಬ್ದಾರಿಯುತ ಬಳಕೆಗೆ ಸಲಹೆ ನೀಡಿದೆ. ಕಳೆದ ಜುಲೈಯಲ್ಲಿ ಯುರೋಪಿಯನ್ ಕಮಿಷನ್‍ನ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮರು ಆಯ್ಕೆಗೊಂಡ ಬಳಿಕ ಉರ್ಸುಲಾ ವಾನ್‍ಡೆರ್ ಲೆಯನ್ ಅವರು `ಸಾಮಾಜಿಕ ಮಾಧ್ಯಮ ವ್ಯಸನ ಮತ್ತು ಸೈಬರ್ ಬುಲ್ಲಿಂಗ್(ಸೈಬರ್‍ನ ಮೂಲಕ ಎಲೆಕ್ಟ್ರಾನಿಕ್ ವಿಧಾನಗಳನ್ನು ಬಳಸಿಕೊಂಡು ಬೆದರಿಸುವ ಅಥವಾ ಕಿರುಕುಳ ನೀಡುವುದು)ನಿಂದ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ನಕಾರಾತ್ಮಕ ಪ್ರಭಾವದ ಹಿನ್ನೆಲೆಯಲ್ಲಿ ಸೂಕ್ತ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುವುದು. ಹಾಗೂ ಯುವಜನರ ಯೋಗಕ್ಷೇಮದ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವದ ಕುರಿತು ಯುರೋಪಿಯನ್ ವ್ಯಾಪ್ತಿಯ ವಿಚಾರಣೆ ನಡೆಸುವುದಾಗಿ ' ಘೋಷಿಸಿದ್ದರು.
6 ವರ್ಷದ ಹಿಂದೆ ನೆದರ್ಲ್ಯಾಂಡ್‍ನ ಕಾಲ್ವಿನ್ ಕಾಲೇಜು ಶಾಲೆಯಲ್ಲಿ ಮೊಬೈಲ್ ಫೋನ್ ನಿಷೇಧಿಸುವ ಬಗ್ಗೆ ಪ್ರಸ್ತಾವಿಸಿದಾಗ `ನಾವೇನು 1800ರ ಯುಗದಲ್ಲಿ ಬದುಕುತ್ತಿದ್ದೇವೆಯೇ? ಎಂಬ ಪ್ರಶ್ನೆ ಹಲವರಿಂದ ಎದುರಾಗಿತ್ತು ಎಂದು ಕಾಲೇಜಿನ ಅಧ್ಯಕ್ಷ ಜಾನ್ ಬಕ್ಕರ್ ಹೇಳಿದ್ದಾರೆ. ಸುಮಾರು 20%ದಷ್ಟು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಂದ ವಿರೋಧ ಎದುರಾದರೂ ಮೊಬೈಲ್ ನಿಷೇಧಿಸುವ ನಿರ್ಧಾರ ಜಾರಿಗೊಳಿಸುವ ಮೂಲಕ ಮೊಬೈಲ್ ನಿಷೇಧಿಸಿದ ನೆದರಲ್ಯಾಂಡಿನ ಮೊದಲ ಶಾಲೆಯಾಗಿ ಗುರುತಿಸಿಕೊಂಡಿದೆ.
ಫ್ರಾನ್ಸ್ ನಲ್ಲಿ 200 ಮಾಧ್ಯಮಿಕ ಶಾಲೆಗಳು ಮೊಬೈಲ್ ನಿಷೇಧದ ಬಗ್ಗೆ ಪರಿಶೀಲಿಸುತ್ತಿವೆ. ಬೆಲ್ಜಿಯಂನ ವಲೋನಿಯಾ ಮತ್ತು ಬ್ರಸೆಲ್ಸ್‍ನಲ್ಲಿರುವ ಫ್ರೆಂಚ್ ಕಲಿಸುವ ಮಾಧ್ಯಮಿಕ ಶಾಲೆಗಳೂ ಮೊಬೈಲ್ ನಿಷೇಧದ ಬಗ್ಗೆ ಚಿಂತನೆ ನಡೆಸಿವೆ. ಹಂಗರಿಯಲ್ಲಿ ಶಾಲೆಗೆ ಬಂದೊಡನೆ ವಿದ್ಯಾರ್ಥಿಗಳ ಫೋನ್‍ಗಳು ಹಾಗೂ ಸ್ಮಾರ್ಟ್ ಸಾಧನಗಳನ್ನು ತೆಗೆದಿರಿಸುವ ಆದೇಶ ಜಾರಿಗೊಳಿಸಲಾಗಿದೆ.
ಇಟಲಿ ಮತ್ತು ಗ್ರೀಸ್ ದೇಶಗಳು ಸ್ವಲ್ಪ ಸೌಮ್ಯವಾದ ವಿಧಾನ ಅನುಸರಿಸುತ್ತಿದ್ದು ವಿದ್ಯಾರ್ಥಿಗಳು ತಮ್ಮೊಂದಿಗೆ ಫೋನ್‍ಗಳನ್ನು ಒಯ್ಯಲು ಅವಕಾಶ ನೀಡಿವೆ. ಆದರೆ ತರಗತಿಯಲ್ಲಿ ಬಳಸುವುದನ್ನು ನಿಷೇಧಿಸಿವೆ.
►ನಿಷೇಧದ ಪರಿಣಾಮದ ಬಗ್ಗೆ ಸಮೀಕ್ಷೆ
2024ರ ಜನವರಿಯಲ್ಲಿ ನೆದರ್ಲ್ಯಾಂಡ್ ಸರಕಾರ ಎಲ್ಲಾ ಶಾಲೆಗಳು ಮೊಬೈಲ್ ಫೋನ್‍ಗಳು, ಟ್ಯಾಬ್ಲೆಟ್‍ಗಳು ಮತ್ತು ಸ್ಮಾರ್ಟ್ ವಾಚ್‍ಗಳನ್ನು ದೇಶದಾದ್ಯಂತದ ಮಾಧ್ಯಮಿಕ ಶಾಲೆ ಮತ್ತು ಪ್ರಾಥಮಿಕ ಶಾಲೆಗಳ ತರಗತಿಯಲ್ಲಿ ನಿಷೇಧಿಸಲು ಸಲಹೆ ನೀಡಿತು. ನಿಷೇಧದ ಬಗ್ಗೆ ವಿದ್ಯಾರ್ಥಿಗಳ ಮತ್ತು ಪೋಷಕರ ಅಭಿಪ್ರಾಯ ಸಂಗ್ರಹಿಸಲು ರ್ಯಾಡ್‍ಬೌಡ್ ವಿವಿಯ ಸಂಶೋಧಕರು ಸಮೀಕ್ಷೆ ನಡೆಸಿದರು. ನಿಷೇಧದ ಬಳಿಕ ವಿದ್ಯಾರ್ಥಿಗಳು ಪಾಠದತ್ತ ಮತ್ತು ತರಗತಿಯಲ್ಲಿ ತಮ್ಮ ಕೆಲಸದತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ ಎಂದು ಶಿಕ್ಷಕರು ಹೇಳಿದ್ದಾರೆ. ಅನೇಕ ವಿದ್ಯಾರ್ಥಿಗಳು ನೈಜ ಜೀವನದ ಸಾಮಾಜಿಕ ಸಂವಹನಗಳನ್ನು ವರದಿ ಮಾಡಿದ್ದಾರೆ. ಆದ್ದರಿಂದ ಇದು ಧನಾತ್ಮಕ ಬೆಳವಣಿಗೆಯಾಗಿದೆ ಎಂದು ಸಂಶೋಧನಾ ತಂಡದಲ್ಲಿದ್ದ ಲೂಯಿಸ್ ಪೊವೆಲ್ಸ್ ಅಭಿಪ್ರಾಯ ಪಟ್ಟಿದ್ದಾರೆ.