ಮಲೇಶ್ಯಾದ ಮಾಜಿ ಪ್ರಧಾನಿಯ ವಿರುದ್ಧ ದೇಶದ್ರೋಹ ಆರೋಪ
Update: 2024-08-27 16:45 GMT
ಕೌಲಲಾಂಪುರ : ಮಾಜಿ ದೊರೆಯ ಬಗ್ಗೆ ನೀಡಿದ ಹೇಳಿಕೆಗಾಗಿ ಮಲೇಶ್ಯಾದ ಮಾಜಿ ಪ್ರಧಾನಿ ಮುಹಿಯುದ್ದೀನ್ ಯಾಸಿನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.
ಉತ್ತರದ ಪಟ್ಟಣವಾದ ಗುವಾ ಮುಸಂಗ್ನ. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ 77 ವರ್ಷದ ಯಾಸಿನ್ ತಪ್ಪೊಪ್ಪಿಕೊಂಡಿಲ್ಲ. ವಿಚಾರಣೆ ಸಂದರ್ಭ ಮಾಜಿ ಪ್ರಧಾನಿಯ ಹಲವು ಬೆಂಬಲಿಗರು ನ್ಯಾಯಾಲಯದ ಹೊರಗೆ ಸೇರಿದ್ದರು. ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿದೆ ಎಂದು ಅವರ ವಕೀಲರು ಹೇಳಿದ್ದಾರೆ.
ಈ ತಿಂಗಳಲ್ಲಿ ನಡೆದಿದ್ದ ಉಪಚುನಾವಣೆಗೂ ಮುನ್ನ ನಡೆದಿದ್ದ ರ್ಯಾಲಿಯಲ್ಲಿ ಮಾತನಾಡಿದ್ದ ಯಾಸಿನ್, 2022ರಲ್ಲಿ ನಡೆದಿದ್ದ ಚುನಾವಣೆಯ ಬಳಿಕ ತನ್ನ ಪ್ರತಿಸ್ಪರ್ಧಿಯನ್ನು ಪ್ರಧಾನಿಯಾಗಿ ನೇಮಿಸಿದ್ದ ದೊರೆಯ ನಿರ್ಧಾರವನ್ನು ಪ್ರಶ್ನಿಸಿದ್ದರು. 2022ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮೈತ್ರಿಪಕ್ಷಗಳ ಒಕ್ಕೂಟದ ಬೆಂಬಲ ಪಡೆದಿದ್ದ ಅನ್ವರ್ ಇಬ್ರಾಹಿಂರನ್ನು ದೊರೆ ಪ್ರಧಾನಿಯಾಗಿ ನೇಮಕಗೊಳಿಸಿದ್ದರು.