ಒಮ್ಮತದಿಂದ ‘ಬ್ರಿಕ್ಸ್' ವಿಸ್ತರಣೆ; ಶೃಂಗಸಭೆಯಲ್ಲಿ ಮೋದಿ ಪ್ರತಿಪಾದನೆ

Update: 2023-08-23 16:10 GMT

Photo: PTI

ಜೊಹಾನ್ಸ್‍ಬರ್ಗ್: ಐದು ಸದಸ್ಯದೇಶಗಳ ಒಮ್ಮತದಿಂದ ‘ಬ್ರಿಕ್ಸ್' ಸಂಘಟನೆಯ ವಿಸ್ತರಣೆಯನ್ನು ಭಾರತ ಬೆಂಬಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಶೃಂಗಸಭೆಯ ಆರಂಭದ ಅಧಿವೇಶನದಲ್ಲಿ ಮಾತನಾಡಿದ ಮೋದಿ `ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಬಾಹ್ಯಾಕಾಶ, ಶಿಕ್ಷಣ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ವರ್ಧಿತ ಸಹಯೋಗದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತ ಅಭಿವೃದ್ಧಿಪಡಿಸಿದ ಪರಿಹಾರಗಳ ಬಳಕೆಯು ಬ್ರಿಕ್ಸ್ ವೇದಿಕೆಯನ್ನು `ಭವಿಷ್ಯಕ್ಕೆ ಸಜ್ಜುಗೊಂಡ ಸಂಘಟನೆಯಾಗಿ' ರೂಪಿಸಲಿದೆ ಎಂದರು.

ಹಿಂದಿಯಲ್ಲಿ ಮಾತನಾಡಿದ ಮೋದಿ `2016ರಲ್ಲಿ ಭಾರತವು ಬ್ರಿಕ್ಸ್‍ನ ಅಧ್ಯಕ್ಷತೆ ವಹಿಸಿದ್ದಾಗ ಈ ವೇದಿಕೆಯನ್ನು ಪ್ರತಿಕ್ರಿಯಾಶೀಲ, ಅಂತರ್ಗತ ಮತ್ತು ಸಾಮೂಹಿಕ ಪರಿಹಾರ ರೂಪಿಸುವ ಸಂಸ್ಥೆಯೆಂದು ವ್ಯಾಖ್ಯಾನಿಸಲಾಗಿತ್ತು. 7 ವರ್ಷಗಳ ಬಳಿಕ ಹೇಳುವುದಾದರೆ ಬ್ರಿಕ್ಸ್ ಎಂದರೆ ‘ಅಡೆತಡೆಗಳ ನಿವಾರಣೆ, ಆರ್ಥಿಕತೆಯ ಪುನರುಜ್ಜೀವನ, ನಾವೀನ್ಯತೆಯನ್ನು ಪ್ರೇರೇಪಿಸುವುದು, ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಭವಿಷ್ಯವನ್ನು ರೂಪಿಸುವುದು' ಎಂದು ವ್ಯಾಖ್ಯಾನಿಸಬಹುದು ಎಂದರು.

ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನದಲ್ಲಿ ಸಹಕಾರವು ಬ್ರಿಕ್ಸ್ ಅನ್ನು ಬಲಿಷ್ಟಗೊಳಿಸಬಹುದು. ದೂರದ ಹಳ್ಳಿಪ್ರದೇಶಗಳಲ್ಲಿ ಜ್ಞಾನ ಹಂಚಿಕೆಗಾಗಿ ಭಾರತ ರೂಪಿಸಿದ ಡಿಜಿಟಲ್ ಮೂಲಸೌಕರ್ಯ `ದೀಕ್ಷಾ', ಎಐ ಆಧಾರಿತ ಭಾಷಾ ವೇದಿಕೆ `ಭಾಷಿಣಿ', ಲಸಿಕೀಕರಣಕ್ಕಾಗಿ ರೂಪಿಸಿದ `ಕೊವಿನ್' ವೇದಿಕೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ `ಇಂಡಿಯಾ ಸ್ಟ್ಯಾಕ್' ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ವೈವಿಧ್ಯತೆಯು ಭಾರತದ ದೊಡ್ಡ ಶಕ್ತಿಯಾಗಿದೆ. ಭಾರತದಲ್ಲಿ ಯಾವುದೇ ಸಮಸ್ಯೆಗೆ ಪರಿಹಾರವು ಈ ವೈವಿಧ್ಯತೆಯ ಪರೀಕ್ಷೆಯಿಂದ ಹೊರಹೊಮ್ಮುತ್ತದೆ. ಆದ್ದರಿಂದಲೇ ಈ ಪರೀಕ್ಷೆಯನ್ನು ಪ್ರಪಂಚದ ಯಾವುದೇ ಮೂಲೆಯಲ್ಲಿ ಕಾರ್ಯಗತಗೊಳಿಸಬಹುದು. ಭಾರತ ರೂಪಿಸಿದ ಎಲ್ಲಾ ವೇದಿಕೆಗಳನ್ನೂ ಬ್ರಿಕ್ಸ್ ಸದಸ್ಯ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಿದೆ. ಬ್ರಿಕ್ಸ್ ಸದಸ್ಯರು ಪರಸ್ಪರರ ಸಾಮಥ್ರ್ಯಗಳನ್ನು ಗುರುತಿಸಲು ಮತ್ತು 5 ಸದಸ್ಯ ದೇಶಗಳಲ್ಲಿ ಕಂಡುಬರುವ ವಿವಿಧ ತಳಿಗಳ ಹುಲಿಯ ಸಂರಕ್ಷಣೆಗೆ ಸಹಕಾರ ನೀಡಬಹುದು' ಎಂದರು.

ಆಫ್ರಿಕಾ ಒಕ್ಕೂಟಕ್ಕೆ ಜಿ20 ಪೂರ್ಣಸದಸ್ಯತ್ವ ನೀಡಬೇಕು ಎಂಬ ಭಾರತದ ಪ್ರಸ್ತಾವನೆಯನ್ನು ಬೆಂಬಲಿಸುವಂತೆ ಅವರು ಇದೇ ಸಂದರ್ಭ ಬ್ರಿಕ್ಸ್ ರಾಷ್ಟ್ರಗಳಿಗೆ ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News