ಎಫ್-16 ಯುದ್ಧ ವಿಮಾನ ಪತನ | ಉಕ್ರೇನ್ ವಾಯುಪಡೆ ಕಮಾಂಡರ್ ವಜಾ
ಕೀವ್ : ರಶ್ಯದ ಬಾಂಬ್‍ದಾಳಿ ಸಂದರ್ಭ ಎಫ್-16 ಯುದ್ಧ ವಿಮಾನ ಪತನಗೊಂಡ ಘಟನೆಯ ಬಳಿಕ ವಾಯುಪಡೆಯ ಕಮಾಂಡರ್‍ನನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ವಜಾಗೊಳಿಸಿರುವುದಾಗಿ ವರದಿಯಾಗಿದೆ.
ಪಾಶ್ಚಿಮಾತ್ಯ ಮಿತ್ರರಿಂದ ಉಕ್ರೇನ್ ಪಡೆದಿದ್ದ ಅಮೆರಿಕದ ಅತ್ಯಾಧುನಿಕ ಎಫ್-16 ಯುದ್ಧವಿಮಾನ ಪತನಗೊಂಡು ಪೈಲಟ್ ಮೃತಪಟ್ಟ 4 ದಿನಗಳ ಬಳಿಕ ಅಧ್ಯಕ್ಷರು ವಾಯುಪಡೆಯ ಕಮಾಂಡರ್ ಲೆ|ಜ| ಮಿಕೋಲ ಒಲೆಶುಂಕ್‍ರನ್ನು ವಜಾಗೊಳಿಸುವ ಕ್ರಮ ಕೈಗೊಂಡಿದ್ದಾರೆ. `ಜನರನ್ನು, ಸೇನಾ ಸಿಬ್ಬಂದಿಯನ್ನು ರಕ್ಷಿಸಬೇಕಿದೆ, ನಮ್ಮೆಲ್ಲಾ ಯೋಧರ ಯೋಗಕ್ಷೇಮ ನೋಡಿಕೊಳ್ಳಬೇಕಿದೆ. ನಮ್ಮ ಸೇನೆಯನ್ನು ಕಮಾಂಡ್ ಮಟ್ಟದಲ್ಲಿ ಬಲಪಡಿಸಬೇಕಿದೆ' ಎಂದು ವಜಾ ಆದೇಶದ ಬಳಿಕ ಝೆಲೆನ್‍ಸ್ಕಿ ಹೇಳಿದ್ದಾರೆ. ಲೆ|ಜ| ಅನಾಟೊಲಿ ಕ್ರಿವೊನೊಝ್ಕೊರನ್ನು ಹಂಗಾಮಿ ವಾಯುಪಡೆ ಕಮಾಂಡರ್ ಆಗಿ ನೇಮಿಸಲಾಗಿದೆ.
ಎಫ್-16 ಯುದ್ಧವಿಮಾನವನ್ನು ಪ್ಯಾಟ್ರಿಯಾಟ್ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ಈ ಪ್ರಮಾದಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಉಕ್ರೇನ್ ಸಂಸತ್‍ನ ರಕ್ಷಣಾ ಸಮಿತಿಯ ಉಪ ಮುಖ್ಯಸ್ಥೆ ಮರಿಯಾನಾ ಬೆಝುಲಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಿಕೋಲ ಒಲೆಶುಂಕ `ಇಂತಹ ಹೇಳಿಕೆಗಳು ವಾಯುಪಡೆಗೆ ಮತ್ತು ಅಮೆರಿಕದ ಶಸ್ತ್ರಾಸ್ತ್ರ ಉತ್ಪಾದಕರಿಗೆ ಕೆಟ್ಟ ಹೆಸರು ತರುತ್ತದೆ. ಆದ್ದರಿಂದ ಮರಿಯಾನಾ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದರು. ಇದೀಗ ಒಲೆಶುಂಕರನ್ನು ವಜಾಗೊಳಿಸಿದ ಆದೇಶ ಪ್ರಕಟಗೊಂಡ ಬಳಿಕ `ಸತ್ಯ ಗೆಲ್ಲುತ್ತದೆ' ಎಂದು ಮರಿಯಾನಾ ಟ್ವೀಟ್ ಮಾಡಿದ್ದಾರೆ.