ವಿಶ್ವಸಂಸ್ಥೆ ನೆರವು ಏಜೆನ್ಸಿಗೆ ಆರ್ಥಿಕ ಕೊರತೆ : ಒಸಿಎಚ್ಎ ವರದಿ

Update: 2023-12-11 16:33 GMT

Photo: PTI 

ಜಿನೆವಾ: ವಿಶ್ವದಾದ್ಯಂತ ಹತಾಶ ಸ್ಥಿತಿಯಲ್ಲಿರುವ ಸುಮಾರು 180 ದಶಲಕ್ಷ ಜನರಿಗೆ ಜೀವ ಉಳಿಸುವ ನೆರವನ್ನು ಒದಗಿಸಲು ಮುಂದಿನ ವರ್ಷ 46.4 ಶತಕೋಟಿ ಡಾಲರ್ ಮೊತ್ತ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ.

ಹವಾಮಾನ ವೈಪರೀತ್ಯ, ಪ್ರಾಕೃತಿಕ ದುರಂತಗಳು, ಸಂಘರ್ಷ ಮತ್ತು ಕುಸಿಯುತ್ತಿರುವ ಆರ್ಥಿಕತೆಗಳು ಅತ್ಯಂತ ದುರ್ಬಲ ದೇಶಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದ್ದು 2024ರ ಮಾನವೀಯ ಮೇಲ್ನೋಟ ಆಶಾದಾಯಕವಾಗಿಲ್ಲ ಎಂದು ವಿಶ್ವಸಂಸ್ಥೆ ನೆರವು ಏಜೆನ್ಸಿ(ಒಸಿಎಚ್ಎ) ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ.

ಈಗ ಗಾಝಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಬಗ್ಗೆ ಜಾಗತಿಕ ಗಮನ ಕೇಂದ್ರೀಕೃತಗೊಂಡಿದೆ. ಆದರೆ ವಿಶಾಲವಾದ ಮಧ್ಯಪ್ರಾಚ್ಯ, ಸುಡಾನ್ ಮತ್ತು ಅಫ್ಘಾನಿಸ್ತಾನಗಳಲ್ಲೂ ಅಂತರಾಷ್ಟ್ರೀಯ ನೆರವು ಕಾರ್ಯಾಚರಣೆ ಅತ್ಯಗತ್ಯವಾಗಿದೆ ಎಂಬುದನ್ನು ಮರೆಯಬಾರದು. ದೇಣಿಗೆಯಲ್ಲಿ ಇಳಿಕೆಯಾಗಿರುವುದರಿಂದ 2023ಕ್ಕೆ ಹೋಲಿಸಿದರೆ ವಾರ್ಷಿಕ ನೆರವು ಮನವಿಯ ಗಾತ್ರ ಮತ್ತು ಅದು ತಲುಪಬೇಕಾದ ಜನರ ಪ್ರಮಾಣವನ್ನು ಕಡಿಮೆಗೊಳಿಸುವ ಅನಿವಾರ್ಯತೆ ಎದುರಾಗಿದೆ. ಅತ್ಯಂತ ಅಮಾನವೀಯ ಸಂದರ್ಭದಲ್ಲೂ ಪ್ರಾಣ ಉಳಿಸುವ, ಹಸಿವಿನ ವಿರುದ್ಧ ಹೋರಾಡುವ, ಮಕ್ಕಳನ್ನು ರಕ್ಷಿಸುವ, ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸುವ, ಆಶ್ರಯ ಮತ್ತು ನೈರ್ಮಲ್ಯ ವ್ಯವಸ್ಥೆ ಒದಗಿಸುವ ಕಾರ್ಯವನ್ನು ಮಾನವೀಯ ಕಾರ್ಯಕರ್ತರು ನಡೆಸುತ್ತಿದ್ದಾರೆ. ಆದರೆ ಅಂತರಾಷ್ಟ್ರೀಯ ಸಮುದಾಯದ ಬೆಂಬಲ ನಿರೀಕ್ಷಿತ ಮಟ್ಟದಲ್ಲಿ ಇರದ ಕಾರಣ ನೆರವಿನ ಪ್ರಮಾಣ ಕಡಿತಗೊಳಿಸುವ ಅನಿವಾರ್ಯತೆಯಿದೆ.

2023ರಲ್ಲಿ 56.7 ಶತಕೋಟಿ ಡಾಲರ್ ನೆರವಿಗೆ ಮನವಿ ಮಾಡಲಾಗಿತ್ತು, ಆದರೆ ಇದರ 35%ದಷ್ಟು ಮೊತ್ತವನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಈ ಮೊತ್ತವನ್ನು 128 ದಶಲಕ್ಷ ಜನತೆಗೆ ಅಗತ್ಯದ ನೆರವು ಒದಗಿಸಲು ಬಳಸಲಾಗಿದೆ. 2023ರಲ್ಲಿ ನಿರೀಕ್ಷಿತ ಮಟ್ಟದಲ್ಲಿ ದೇಣಿಗೆ ಸಂಗ್ರಹ ಸಾಧ್ಯವಾಗದ ಹಿನ್ನೆಲೆಯಲ್ಲಿ 2024ರಲ್ಲಿ ನೆರವು ನಿಧಿಯ ಪ್ರಮಾಣವನ್ನು 46.4 ಶತಕೋಟಿ ಡಾಲರ್ಗೆ ಇಳಿಸಲಾಗಿದ್ದು ತೀವ್ರ ಅಗತ್ಯ ಇರುವವರನ್ನು ಕೇಂದ್ರೀಕರಿಸಲಾಗಿದೆ. ಆದರೆ ಹಲವು ದೇಣಿಗೆದಾರ ದೇಶಗಳು ತಮ್ಮದೇ ಆದ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಈ ಮೊತ್ತ ಸಂಗ್ರಹಿಸುವುದೂ ಸವಾಲಿನ ಕಾರ್ಯವಾಗಿದೆ ಎಂದು ಗ್ರಿಫಿತ್ಸ್ ಹೇಳಿದ್ದಾರೆ.

2024ರಲ್ಲಿ 72 ದೇಶಗಳಿಗೆ ಜೀವವುಳಿಸುವ ನೆರವು ಒದಗಿಸಬೇಕಿದ್ದು ಇದರಲ್ಲಿ 26 ದೇಶಗಳು ಬಿಕ್ಕಟ್ಟು ಎದುರಿಸುತ್ತಿದ್ದರೆ, ನೆರೆಯ 46 ದೇಶಗಳು ವಲಸಿಗರ ಒಳಹರಿವು ಇತ್ಯಾದಿ ಸಮಸ್ಯೆ ಎದುರಿಸುತ್ತಿವೆ.

ಬೃಹತ್ ನೆರವಿನ ನಿರೀಕ್ಷೆಯಲ್ಲಿ 5 ದೇಶಗಳು

ಐದು ದೇಶಗಳು ಅತ್ಯಧಿಕ ನೆರವಿನ ನಿರೀಕ್ಷೆಯಲ್ಲಿವೆ. ಸಿರಿಯಾ (4.4 ಶತಕೋಟಿ ಡಾಲರ್), ಉಕ್ರೇನ್ (3.1 ಶತಕೋಟಿ ಡಾಲರ್), ಅಫ್ಘಾನಿಸ್ತಾನ (3 ಶತಕೋಟಿ ಡಾಲರ್), ಇಥಿಯೋಪಿಯಾ (2.9 ಶತಕೋಟಿ ಡಾಲರ್) ಮತ್ತು ಯೆಮನ್(2.8 ಶತಕೋಟಿ ಡಾಲರ್) ನೆರವಿನ ಅಗತ್ಯದಲ್ಲಿದೆ. 2024ರಲ್ಲಿ ಜಗತ್ತಿನಾದ್ಯಂತ 300 ಶತಕೋಟಿ ಜನತೆಗೆ ತುರ್ತು ನೆರವನ್ನು ಒದಗಿಸಬೇಕಿದೆ (2023ರಲ್ಲಿ ಈ ಪ್ರಮಾಣ 363 ದಶಲಕ್ಷ ) ಆದರೆ ಕೇವಲ 180.5 ದಶಲಕ್ಷ ಜನರಿಗೆ ಮಾತ್ರ ನೆರವು ಒದಗಿಸಲು ಸಾಧ್ಯವಾಗಬಹುದು ಎಂದು ಗ್ರಿಫಿತ್ಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News