ಪಶ್ಚಿಮದಂಡೆಯಲ್ಲಿ ಇಸ್ರೇಲ್ ದಾಳಿಗೆ ಐವರು ಹಮಾಸ್ ಬೆಂಬಲಿಗರ ಬಲಿ
ಜೆರುಸಲೇಂ : ಆಕ್ರಮಿತ ಪಶ್ಚಿಮದಂಡೆಯಲ್ಲಿ ಗುರುವಾರ ನಸುಕಿನಲ್ಲಿ ತಾನು ನಡೆಸಿದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಐವರು ಹಮಾಸ್ ಹೋರಾಟಗಾರರನ್ನು ಹತ್ಯೆಗೈದಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಹತ್ಯೆಯಾದವರಲ್ಲಿ ಹಮಾಸ್ ಬೆಂಬಲಿತ ಸಂಘಟನೆ ‘ಇಸ್ಲಾಮಿಕ್ ಜಿಹಾದ್’ನ ಕಮಾಂಡರ್ ಮುಹಮ್ಮದ್ ಝುಬೇರ್ ಕೂಡಾ ಸೇರಿದ್ದಾನೆಂದು ಅದು ಹೇಳಿದೆ.
ಆದರೆ ಕಮಾಂಡರ್ ಮುಹಮ್ಮದ್ ಝುಬೇರ್, ಇಸ್ರೇಲ್ ದಾಳಿಗೆ ಬಲಿಯಾಗಿರುವ ವರದಿಯನ್ನು ಫೆಲೆಸ್ತೀನಿಯನಂ ಅಧಿಕಾರಿಗಳು ದೃಢಪಡಿಸಿಲ್ಲ. ‘ಅಬು ಶುಜಾ’ ಎಂಬ ಹೆಸರಿನಿಂದಲೇ ಜನಪ್ರಿಯನಾಗಿರುವ ಮುಹಮ್ಮದ್ ಝುಬೇರ್‌ನನ್ನು ಪಶ್ಚಿಮದಂಡೆಯ ತುಲ್ಕಾರೆಮ್ ನಗರದ ಹೊರವಲಯದಲ್ಲಿರುವ ನಿರಾಶ್ರಿತ ಶಿಬಿರದ ಬಳಿ ಹತ್ಯೆಗೈದಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
ಮಸೀದಿಯೊಂದರಲ್ಲಿ ಅವಿತುಕೊಂಡಿದ್ದ ಐವರು ಹಮಾಸ್ ಹೋರಾಟಗಾರರ ಮೇಲೆ ತನ್ನ ಪಡೆಗಳು ಗುರುವಾರ ನಸುಕಿನಲ್ಲಿ ದಾಳಿ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಝುಬೇರ್ ಕೂಡಾ ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ತಕುಲ್ಕಾರೆಮ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ನೋರ್ವ ಫೆಲೆಸ್ತೀನ್ ಹೋರಾಟಗಾರನನ್ನು ಬಂಧಿಸಿರುವುದಾಗಿ ಅದು ತಿಳಿಸಿದೆ.
ಪಶ್ಚಿದಂಡೆಯಲ್ಲಿ ಇಸ್ರೇಲಿ ಸೇನೆಯು ಬುಧವಾರ ಬೃಹತ್ ಮಟ್ಟದ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಇಸ್ರೇಲಿ ಸೈನಿಕರ ಜೊತೆ ಪ್ರದೇಶದ ವಿವಿಧ ಸ್ಥಳಗಳಲ್ಲಿ ನಡೆದ ಘರ್ಷಣೆಗಳಲ್ಲಿ ತನ್ನ 10 ಮಂದಿ ಹೋರಾಟಗಾರರು ಸಾವನ್ನಪ್ಪಿದ್ದಾರೆಂದು ಹಮಾಸ್ ಹೇಳಿದೆ