ಮಾಜಿ ಅಧ್ಯಕ್ಷರು ಕ್ರಿಮಿನಲ್ ಮೊಕದ್ದಮೆಯಿಂದ ಸ್ವಲ್ಪಮಟ್ಟಿನ ವಿನಾಯತಿಗೆ ಅರ್ಹರು : ಅಮೆರಿಕ ಸುಪ್ರೀಂಕೋರ್ಟ್ ತೀರ್ಪು

Update: 2024-07-02 17:18 GMT

ಡೊನಾಲ್ಡ್ ಟ್ರಂಪ್ | PC : NDTV 

ವಾಷಿಂಗ್ಟನ್ : ಮಾಜಿ ಅಧ್ಯಕ್ಷರು ಕ್ರಿಮಿನಲ್ ಮೊಕದ್ದಮೆಯಿಂದ ಸ್ಪಲ್ಪ ಮಟ್ಟಿನ ವಿನಾಯತಿಗೆ ಅರ್ಹರು ಎಂದು ಅಮೆರಿಕದ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ಡೊನಾಲ್ಡ್ ಟ್ರಂಪ್ ಗೆ ಮಹತ್ವದ ಮುನ್ನಡೆ ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕದಲ್ಲಿ 2020ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬುಡಮೇಲುಗೊಳಿಸುವ ಪ್ರಕರಣದಲ್ಲಿ ಟ್ರಂಪ್ಗೆ ದೊರೆತ ಪ್ರಮುಖ ಗೆಲುವು ಇದಾಗಿದ್ದು ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅನರ್ಹಗೊಳ್ಳುವ ಅಪಾಯ ಬಹುತೇಕ ದೂರವಾಗಿದೆ.

ಅಧ್ಯಕ್ಷರು ತಮ್ಮ ಕಚೇರಿಯ ಹೊರ ಪರಿಧಿಯವರೆಗೆ ವಿಸ್ತರಿಸಿದ ಅಧಿಕೃತ ಕಾರ್ಯಗಳಿಗೆ ಕಾನೂನು ಕ್ರಮಗಳಿಂದ ರಕ್ಷಿಸಲ್ಪಡುತ್ತಾರೆ. ಆದರೆ ಅನಧಿಕೃತ ನಡವಳಿಕೆಗಾಗಿ ಕಾನೂನು ಕ್ರಮಗಳನ್ನು ಎದುರಿಸಬಹುದು ಎಂದು ಸರ್ವೋಚ್ಛ ನ್ಯಾಯಾಲಯದ 9 ಸದಸ್ಯರ ನ್ಯಾಯಪೀಠ 6-3ರ ತೀರ್ಪು ನೀಡಿದೆ. 2020ರ ಚುನಾವಣೆಯನ್ನು ಬುಡಮೇಲುಗೊಳಿಸುವ ಪ್ರಯತ್ನಗಳ ಮೇಲ್ವಿಚಾರಣೆ , ಚುನಾವಣಾ ಫಲಿತಾಂಶದ ಪ್ರಮಾಣಪತ್ರ ನೀಡುವುದಕ್ಕೆ ಅಡ್ಡಿಪಡಿಸುವ ಪಿತೂರಿ ರೂಪಿಸಿದ್ದು, ಸರಕಾರ ಮತ್ತು ಮತದಾರರನ್ನು ವಂಚಿಸಲು ಪಿತೂರಿ ನಡೆಸಿದ ಪ್ರಕರಣದಲ್ಲಿ ಟ್ರಂಪ್ ಆರೋಪಿಯಾಗಿದ್ದಾರೆ. ಜತೆಗೆ, ಚುನಾವಣೆಯಲ್ಲಿ ಅಕ್ರಮ ನಡೆದಿರುವುದಾಗಿ ಸುಳ್ಳು ಪ್ರತಿಪಾದನೆ, ಚುನಾವಣೆ ಅಕ್ರಮಗಳ ಬಗ್ಗೆ ನೆಪಮಾತ್ರ ತನಿಖೆ ಆರಂಭಿಸಲು ಅಮೆರಿಕದ ನ್ಯಾಯಾಂಗ ಇಲಾಖೆಯ ಮೇಲೆ ಒತ್ತಡ ಹಾಕಿರುವುದು, ಜೋ ಬೈಡನ್ ಗೆಲುವನ್ನು ಪ್ರಮಾಣಿಕರಿಸುವ ದಾಖಲೆಯನ್ನು ಅಮೆರಿಕ ಸಂಸತ್ ನೀಡುವುದನ್ನು ಅಡ್ಡಿಪಡಿಸುವಂತೆ ತನ್ನ ಉಪಾಧ್ಯಕ್ಷ ಮೈಕ್ ಪೆನ್ಸ್ ಮೇಲೆ ಒತ್ತಡ ಹೇರಿರುವ ಆರೋಪವನ್ನೂ ಟ್ರಂಪ್ ಎದುರಿಸುತ್ತಿದ್ದಾರೆ.

2020ರ ಚುನಾವಣೆ ಫಲಿತಾಂಶವನ್ನು ಬುಡಮೇಲುಗೊಳಿಸುವ ಪ್ರಯತ್ನಕ್ಕೆ ಸಂಬಂಧಿಸಿದ ಟ್ರಂಪ್ ಆರೋಪವು ಅಧಿಕೃತ ಕಾರ್ಯದ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ನಿರ್ಧರಿಸುವಂತೆ ಸೂಚಿಸಿ ಪ್ರಕರಣವನ್ನು ಅಮೆರಿಕ ಜಿಲ್ಲಾ ನ್ಯಾಯಾಧೀಶೆ ತಾನ್ಯಾ ಚುಟ್ಕನ್ ಅವರಿಗೆ ಸುಪ್ರೀಂಕೋರ್ಟ್ ಮರಳಿಸಿದೆ. ಈ ಮರುಪರಿಶೀಲನೆ ಮೂರು ಹಂತಗಳ ಪರೀಕ್ಷೆಯಡಿ ನಡೆಯುತ್ತದೆ. ನಿರ್ದಿಷ್ಟ ನಡವಳಿಕೆಯು ಸಂಪೂರ್ಣ ಪ್ರತಿರಕ್ಷೆಯನ್ನು ಹೊಂದಿರುವ ಪ್ರಮುಖ ಅಧ್ಯಕ್ಷೀಯ ಕಾರ್ಯವಾಗಿದೆಯೇ, ಪೂರ್ವಭಾವಿ ವಿನಾಯಿತಿಯನ್ನು ಹೊಂದಿರುವ ಅಧ್ಯಕ್ಷರ ಹೊರ ಪರಿಧಿಯೊಳಗೆ ಅಧಿಕೃತ ಕ್ರಿಯೆಯಾಗಿದೆಯೇ ಅಥವಾ ಯಾವುದೇ ವಿನಾಯಿತಿಯನ್ನು ಹೊಂದಿರದ ಅನಧಿಕೃತ ಕ್ರಿಯೆಯಾಗಿದೆಯೇ ಎಂಬುದನ್ನು ದೃಢಪಡಿಸಬೇಕಿದೆ. ಟ್ರಂಪ್ ವಿರುದ್ಧ ಆಪಾದಿಸುವುದರಿಂದ ಕಾರ್ಯನಿರ್ವಾಹಕ ಶಾಖೆಯ ಅಧಿಕಾರ ಮತ್ತು ಕಾರ್ಯಗಳ ಮೇಲೆ ಯಾವುದೇ ಹಸ್ತಕ್ಷೇಪದ ಅಪಾಯವನ್ನು ಉಂಟು ಮಾಡುತ್ತದೆಯೇ ಎಂಬುದನ್ನು ತಾನ್ಯಾ ಚುಟ್ಕನ್ ನಿರ್ಧರಿಸಬೇಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಪ್ರಕರಣವನ್ನು ಜಿಲ್ಲಾ ನ್ಯಾಯಾಧೀಶರಿಗೆ ಮರಳಿಸಿರುವುದರಿಂದ ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಪ್ರಕರಣ ಇತ್ಯರ್ಥಗೊಳ್ಳಬೇಕೆಂಬ ಲಿಬರಲ್ ಪಕ್ಷದ ಆಶಯಕ್ಕೆ ಹಿನ್ನಡೆಯಾಗಿದೆ. ಸರಕಾರದ ವರ್ಗೀಕೃತ ದಾಖಲೆಯನ್ನು ಅಕ್ರಮವಾಗಿ ಇರಿಸಿಕೊಂಡಿರುವ ಪ್ರಕರಣ ಸೇರಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಫೆಡರಲ್ ಕ್ರಿಮಿನಲ್ ಪ್ರಕರಣಗಳ ನ್ಯಾಯ ವಿಚಾರಣೆಯನ್ನು ಚುನಾವಣೆ ಮುಗಿಯುವ ತನಕ ವಿಳಂಬಿಸುವುದು ಟ್ರಂಪ್ ಅವರ ಕಾನೂನು ಕಾರ್ಯತಂತ್ರವಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವನ್ನು ನಿರೀಕ್ಷಿಸಿರುವ ಟ್ರಂಪ್, ಮರು ಆಯ್ಕೆಗೊಂಡರೆ ತನಗೆ ನಿಷ್ಠನಾಗಿರುವ ಅಟಾರ್ನಿ ಜನರಲ್ ನೇಮಕಗೊಳಿಸಿದರೆ ಪ್ರಕರಣ ಕೈಬಿಡಬಹುದು ಎಂಬುದು ಟ್ರಂಪ್ ಯೋಜನೆಯಾಗಿದೆ ಎಂದು ಲಿಬರಲ್ ಪಕ್ಷ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News