ಕೀನ್ಯಾದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ, 3 ಮಂದಿ ಸಾವು; 280 ಮಂದಿಗೆ ಗಾಯ

Update: 2024-02-02 16:39 GMT

    Photo:NDTV

ನೈರೋಬಿ : ಕೀನ್ಯಾದ ನೈರೋಬಿಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟದಿಂದ ಉಂಟಾದ ಭೀಕರ ಅಗ್ನಿದುರಂತದಲ್ಲಿ ಕನಿಷ್ಠ 3 ಮಂದಿ ಮೃತಪಟ್ಟಿದ್ದು 280ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಎಂಬಾಕಸಿ ಜಿಲ್ಲೆಯ ಬಳಿ ಅನಿಲ ಮರುಪೂರಣ(ಗ್ಯಾಸ್ ರಿಫಿಲ್ಲಿಂಗ್) ಸಂಸ್ಥೆಯ ಆವರಣದಲ್ಲಿ ನಿಂತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯಲ್ಲಿ ಸ್ಫೋಟ ಸಂಭವಿಸಿದ್ದು ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿ ವ್ಯಾಪಿಸಿದ್ದು ಹಲವು ಮನೆಗಳು, ಅಂಗಡಿಗಳು ಹಾಗೂ ವಾಹನಗಳಿಗೆ ಹಾನಿಯಾಗಿದೆ. ಮಗು ಸೇರಿದಂತೆ 3 ಮಂದಿ ಸಾವನ್ನಪ್ಪಿದ್ದು ಕನಿಷ್ಠ 25 ಮಕ್ಕಳ ಸಹಿತ 281 ಮಂದಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಸ್ಥೆಯ ಭದ್ರತಾ ಸಿಬಂದಿಯನ್ನು ಬಂಧಿಸಲಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಎಂಬಾಕಸಿ ಪೊಲೀಸ್ ಮುಖ್ಯಸ್ಥ ವೆಸ್ಲೆ ಕಿಮೆಟೊ ಹೇಳಿದ್ದಾರೆ. ಮಧ್ಯರಾತ್ರಿ ವೇಳೆ ಸಂಭವಿಸಿದ ಸ್ಫೋಟದ ತೀವ್ರತೆಗೆ ಲಾರಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಗಳು ಬೆಂಕಿ ಹೊತ್ತಿಕೊಂಡು ಸಮೀಪದ ಮನೆ, ಗೋಡೌನ್‍ನತ್ತ ಹಾರಿಬಂದವು. ಜವಳಿ ಮತ್ತು ಉಡುಪು ಸಂಗ್ರಹಿಸಿಟ್ಟಿದ್ದ ಗೋದಾಮು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹಲವು ಮನೆಗಳಿಗೂ ತೀವ್ರ ಹಾನಿಯಾಗಿದ್ದು ಹಲವು ವಾಹನಗಳು ಸುಟ್ಟು ಭಸ್ಮವಾಗಿವೆ. ಸ್ಫೋಟದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿದ್ದ 4 ಮಹಡಿಯ ಕಟ್ಟಡವೊಂದರ ಮೇಲ್ಛಾವಣಿಗೆ ಬೆಂಕಿಯ ಉಂಡೆಯಾಗಿದ್ದ ಗ್ಯಾಸ್ ಸಿಲಿಂಡರ್ ಅಪ್ಪಳಿಸಿದ್ದರಿಂದ ಛಾವಣಿ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೈರೋಬಿಯ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ಸುಮಾರು 280 ಗಾಯಾಳುಗಳನ್ನು ಸ್ಥಳಾಂತರಿಸಲಾಗಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಪಡೆ ಹಾಗೂ ಇತರ ರಕ್ಷಣಾ ತಂಡಗಳು ಹರಸಾಹಸ ಪಡುತ್ತಿದೆ ಎಂದು ಕೀನ್ಯಾ ರೆಡ್‍ಕ್ರಾಸ್ ಹೇಳಿದೆ. ರಕ್ಷಣಾ ಕಾರ್ಯಾಚರಣೆ ಮತ್ತು ಗಾಯಾಳುಗಳ ಸ್ಥಳಾಂತರ ಕಾರ್ಯವನ್ನು ಸಂಘಟಿಸಲು ದುರಂತ ನಡೆದ ಸ್ಥಳದಲ್ಲಿ ಕಮಾಂಡ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈಗ ಈ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕಮಾಂಡ್ ಕೇಂದ್ರದ ವಕ್ತಾರ ಎಂವುವರಾ ಹೇಳಿದ್ದಾರೆ.

ಸ್ಫೋಟ ಸಂಭವಿಸಿದ ಗ್ಯಾಸ್ ರಿಫಿಲಿಂಗ್ ಸ್ಥಾವರಕ್ಕೆ ಲೈಸೆನ್ಸ್ ಪಡೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ತನಿಖೆ ಮುಂದುವರಿದಿದೆ ಎಂದು ಕೀನ್ಯಾದ ಇಂಧನ ಮತ್ತು ಪೆಟ್ರೋಲಿಯಂ ನಿಯಂತ್ರಣ ಪ್ರಾಧಿಕಾರ ಶುಕ್ರವಾರ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News