ಗಾಝಾದಿಂದ ಯುರೋಪ್ ಗೆ 1000 ಮಹಿಳೆ, ಮಕ್ಕಳ ಸ್ಥಳಾಂತರ!

Update: 2024-10-21 15:55 GMT

ಕೋಪನ್ ಹ್ಯಾಗನ್ : ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ಸುಮಾರು 1,000 ಮಹಿಳೆಯರು ಮತ್ತು ಮಕ್ಕಳನ್ನು ಶೀಘ್ರವೇ ಗಾಝಾದಿಂದ ಯುರೋಪ್ ಗೆ ಸ್ಥಳಾಂತರಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಶಾಖೆಯ ಮುಖ್ಯಸ್ಥ ಹ್ಯಾನ್ಸ್ ಕ್ಲೂಗ್ ಸೋಮವಾರ ಹೇಳಿದ್ದಾರೆ.

ಯುದ್ಧದಿಂದ ಜರ್ಜರಿತಗೊಂಡಿರುವ ಫೆಲೆಸ್ತೀನ್ ಪ್ರದೇಶವನ್ನು ಮುತ್ತಿಗೆ ಹಾಕಿರುವ ಇಸ್ರೇಲ್ `ಮುಂದಿನ ತಿಂಗಳೊಳಗೆ ಗಾಝಾದಿಂದ ಯುರೋಪಿಯನ್ ಯೂನಿಯನ್ಗೆ 1000 ವೈದ್ಯಕೀಯ ಸ್ಥಳಾಂತರಕ್ಕೆ ಬದ್ಧವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಂಬಂಧಿಸಿದ ಯುರೋಪಿಯನ್ ಯೂನಿಯನ್ ದೇಶಗಳು ಸ್ಥಳಾಂತರಿಸುವಿಕೆಗೆ ಬೇಕಾದ ಏರ್ಪಾಡು ಮಾಡಲಿದೆ. 2023ರ ಅಕ್ಟೋಬರ್ನಲ್ಲಿ ಯುದ್ಧ ಆರಂಭಗೊಂಡಂದಿನಿಂದ ಗಾಝಾದಿಂದ 7 ಯುರೋಪಿಯನ್ ದೇಶಗಳಿಗೆ 600 ವೈದ್ಯಕೀಯ ಸ್ಥಳಾಂತರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ವ್ಯವಸ್ಥೆ ಮಾಡಿದೆ. ನಮ್ಮ ನಿರಂತರ ಸಂವಾದದಿಂದ ಇದು ಸಾಧ್ಯವಾಗಿದೆ ' ಎಂದು ಹ್ಯಾನ್ಸ್ ಕ್ಲೂಗ್ ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ಗಾಝಾದಲ್ಲಿನ ಆರೋಗ್ಯ ವ್ಯವಸ್ಥೆಗಳನ್ನು ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದು ಅಲ್ಲಿನ ವೈದ್ಯಕೀಯ ಸಿಬ್ಬಂದಿಗಳಿಗೆ ಚಿತ್ರಹಿಂಸೆ ನೀಡುತ್ತಿದೆ ಮತ್ತು ಅವರ ಹತ್ಯೆ ಮಾಡುತ್ತಿದೆ. ಇದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಹೇಳಿದ್ದಾರೆ. ತುರ್ತು ವೈದ್ಯಕೀಯ ಆರೈಕೆಗಾಗಿ ಗಾಝಾದಿಂದ ಸುಮಾರು 10,000 ಜನರನ್ನು ತುರ್ತಾಗಿ ಸ್ಥಳಾಂತರಿಸುವ ಅಗತ್ಯವಿದೆ ಎಂದು ಇಸ್ರೇಲ್ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಿಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ರಿಕ್ ಪೀಪರ್ಕಾರ್ನ್ ಇತ್ತೀಚೆಗೆ ಹೇಳಿದ್ದರು.

ಉಕ್ರೇನ್ನಲ್ಲಿಯೂ ಸಂಬಂಧಿಸಿದ ಎಲ್ಲಾ ಪಕ್ಷಗಳ ಜತೆ ಸಂವಾದ ಮುಂದುವರಿದಿದೆ. ಈಗ ರಶ್ಯ ಆಕ್ರಮಿತ ಉಕ್ರೇನ್ ಪ್ರದೇಶವಾದ ಡೊನ್ಬಾಸ್ನಲ್ಲಿ 15,000 ಎಚ್ಐವಿ-ಏಡ್ಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದ ವಿಚಾರದಲ್ಲಿ ರಾಜಕೀಯ ತರದೇ ಕಾರ್ಯನಿರ್ವಹಿಸುವ ಪ್ರಾಮುಖ್ಯತೆಯನ್ನು ಇದು ಒತ್ತಿಹೇಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯದ ಆಕ್ರಮಣದ ನಂತರ ಉಕ್ರೇನ್ನಲ್ಲಿನ ಆರೋಗ್ಯ ಕೇಂದ್ರಗಳ ಮೇಲೆ ಸುಮಾರು 2,000 ದಾಳಿಗಳು ನಡೆದಿದೆ. ಇಂತಹ ಘಟನೆಗಳನ್ನು ಯಾವತ್ತೂ ಅತ್ಯಂತ ಬಲವಾಗಿ ಖಂಡಿಸುತ್ತಾ ಬಂದಿದ್ದೇವೆ. ಆದರೆ ಯುದ್ಧದ ಬಳಿಕ ಉಕ್ರೇನ್ಗೆ ಎದುರಾಗಿರುವ ಮೂರನೇ ಚಳಿಗಾಲದ ಸಿದ್ಧತೆಗಳ ಬಗ್ಗೆ ಕಳವಳವಿದೆ. ನಾಗರಿಕರು ಬಳಸುವ 80%ದಷ್ಟು ವಿದ್ಯುತ್ ಗ್ರಿಡ್ ನಾಶವಾಗಿದೆ ಅಥವಾ ಹಾನಿಗೊಂಡಿದೆ. ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವ ತಜ್ಞ ವೈದ್ಯರು ತಮ್ಮ ತಲೆಯ ಮೇಲೆ ಲ್ಯಾಂಪ್ ಸಿಕ್ಕಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಚಳಿಗಾಲ ಅತ್ಯಂತ ಕಠಿಣವಾಗಿರಲಿದೆ ಎಂದು ಹ್ಯಾನ್ಸ್ ಕ್ಲೂಗ್ ಹೇಳಿದ್ದಾರೆ.

ಯುರೋಪ್ನ ಆರೋಗ್ಯ ರಕ್ಷಣಾ ವ್ಯವಸ್ಥೆಗಳ ಮೇಲಿನ ಒತ್ತಡದ ಹೊರತಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಯುರೋಪ್ ವಲಯವನ್ನು ಪ್ರತಿನಿಧಿಸುವ 53 ದೇಶಗಳು ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಒಟ್ಟುಗೂಡಲು ಸಾಧ್ಯವಾಗಿದೆ. ರಾಷ್ಟ್ರೀಯ ಆರೋಗ್ಯ ರಕ್ಷಣಾ ವ್ಯವಸ್ಥೆಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕ ಮತ್ತು ಆದ್ಯತೆಯಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News