ತೈವಾನ್ ಜಲಸಂಧಿಯ ಮೂಲಕ ಸಾಗಿದ ಅಮೆರಿಕ, ಕೆನಡ ಸಮರನೌಕೆಗಳು

Update: 2024-10-21 15:47 GMT

PC : X 

ತೈಪೆ : ತೈವಾನ್ ಮತ್ತು ಚೀನಾವನ್ನು ಪ್ರತ್ಯೇಕಿಸುವ ತೈವಾನ್ ಜಲಸಂಧಿಯ ಮೂಲಕ ಅಮೆರಿಕ ಮತ್ತು ಕೆನಡಾದ ಸಮರ ನೌಕೆಗಳು ಹಾದುಹೋಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಈ ಸೂಕ್ಷ್ಮ ಜಲಮಾರ್ಗದ ಮೇಲೆ ಹಕ್ಕನ್ನು ಪ್ರತಿಪಾದಿಸುತ್ತಿರುವ ಚೀನಾ ಕಳೆದ ವಾರ ಈ ಪ್ರದೇಶದಲ್ಲಿ ಬೃಹತ್ ಸಮರಾಭ್ಯಾಸ ನಡೆಸಿತ್ತು. 180 ಕಿ.ಮೀ ಉದ್ದದ ತೈವಾನ್ ಜಲಸಂಧಿಯ ಮೂಲಕ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ನಿಯಮಿತವಾಗಿ ಹಾದುಹೋಗುವ ಮೂಲಕ ಈ ಅಂತರಾಷ್ಟ್ರೀಯ ಜಲಮಾರ್ಗದ ಸ್ಥಾನಮಾನವನ್ನು ಖಚಿತಪಡಿಸಲು ನಡೆಸುವ ಕ್ರಮಗಳು ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ.

ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಯುಎಸ್ಎಸ್ ಹಿಗ್ಗಿನ್ಸ್ ಮತ್ತು ಕೆನಡಾ ನೌಕಾಪಡೆಯ ಎಚ್ಎಂಸಿಎಸ್ ವ್ಯಾಂಕೋವರ್ ಹಡಗುಗಳು ಅಕ್ಟೋಬರ್ 20ರಂದು ತೈವಾನ್ ಜಲಸಂಧಿಯಲ್ಲಿ ನಿಯತಕಾಲಿಕ ಪ್ರಯಾಣ ನಡೆಸಿದೆ ಎಂದು ಅಮೆರಿಕ ನೌಕಾಪಡೆಯ ಹೇಳಿಕೆ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ `ಅಮೆರಿಕ ಮತ್ತು ಕೆನಡಾದ ಕೃತ್ಯಗಳು ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಗೆ ಅಡ್ಡಿಪಡಿಸಿದೆ. ಎರಡೂ ಹಡಗುಗಳ ಬಗ್ಗೆ ಚೀನಾ ಸೇನೆಯ ನೌಕಾಪಡೆ ಹಾಗೂ ವಾಯುಪಡೆಯ ವಿಮಾನಗಳು ನಿರಂತರ ನಿಗಾ ವಹಿಸಿದ್ದವು ಮತ್ತು ಕಟ್ಟೆಚ್ಚರ ವಹಿಸಲಾಗಿತ್ತು' ಎಂದು ಚೀನಾ ಮಿಲಿಟರಿ ವಕ್ತಾರ ಕ್ಯಾಪ್ಟನ್ ಲಿ ಕ್ಸಿ ಹೇಳಿದ್ದಾರೆ.

ಅಮೆರಿಕ ಮತ್ತು ಕೆನಡಾದ ನೌಕೆಗಳು ಜಲಸಂಧಿಯ ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣಿಸಿದ್ದು ಈ ಸಂದರ್ಭ ಸುತ್ತಮುತ್ತಲಿನ ಸಮುದ್ರ ಮತ್ತು ವಾಯು ಪ್ರದೇಶದ ಪರಿಸ್ಥಿತಿ ಸಹಜ ಮತ್ತು ಸಾಮಾನ್ಯವಾಗಿತ್ತು ಎಂದು ತೈವಾನ್ನ ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News