ಜಾರ್ಜಿಯಾ ಚುನಾವಣೆ ಹಸ್ತಕ್ಷೇಪ ಪ್ರಕರಣ : ಟ್ರಂಪ್ ವಿರುದ್ಧದ 6 ಆರೋಪ ರದ್ದು
ನ್ಯೂಯಾರ್ಕ್: 2020ರ ಚುನಾವಣೆಯಲ್ಲಿ ಜಾರ್ಜಿಯಾ ರಾಜ್ಯದಲ್ಲಿ ಹಸ್ತಕ್ಷೇಪ ನಡೆಸಿರುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಆಪ್ತರ ವಿರುದ್ಧ ದಾಖಲಾಗಿದ್ದ ಹಲವು ಆರೋಪಗಳಲ್ಲಿ 6 ಆರೋಪಗಳನ್ನು ಫುಲ್ಟನ್ ಕೌಂಟಿ ನ್ಯಾಯಾಲಯದ ನ್ಯಾಯಾಧೀಶ ಸ್ಕಾಟ್ ಮೆಕಾಫಿ `ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪಕ್ಕೆ ಸೂಕ್ತ ಪುರಾವೆಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಜತೆಗೆ, ಆರೋಪಗಳಿಗೆ ಉತ್ತರಿಸಲು ಪ್ರತಿವಾದಿಗಳಿಗೆ ಸಾಕಷ್ಟು ಸಮಯಾವಕಾಶ ಒದಗಿಸದೆ ಇರುವುದರಿಂದ ಟ್ರಂಪ್ ಹಾಗೂ 14 ಸಹ ಆರೋಪಿಗಳ ವಿರುದ್ಧದ ದೋಷಾರೋಪದಲ್ಲಿ ಉಲ್ಲೇಖಿಸಿರುವ 6 ಕೌಂಟ್ ಆರೋಪಗಳನ್ನು ರದ್ದುಗೊಳಿಸಲಾಗಿದೆ. ಆದರೆ ಅಕ್ರಮ ಎಸಗಿರುವುದು ಸೇರಿದಂತೆ ಇತರ 10 ಕ್ರಿಮಿನಲ್ ಕೌಂಟ್ ಆರೋಪಗಳ ತನಿಖೆ ಮುಂದುವರಿಯಲಿದೆ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜಿಯಾ ರಾಜ್ಯದ ಮತದಾನವನ್ನು ರದ್ದುಗೊಳಿಸುವಂತೆ ಜಾರ್ಜಿಯಾದ ಕಾರ್ಯದರ್ಶಿ ಬ್ರಾಡ್ ರಾಫೆನ್ಸ್‍ಪರ್ಗರ್ ಮನವೊಲಿಸಲು ಟ್ರಂಪ್ ಹಾಗೂ ಅವರ ಸಹವರ್ತಿ ಮಾರ್ಕ್ ಮೆಡೋಸ್ ಪ್ರಯತ್ನಿಸಿದ್ದರು ಎಂದು ಆರೋಪ ಪಟ್ಟಿ ದಾಖಲಿಸಲಾಗಿದೆ.