ಜರ್ಮನಿ, ಫ್ರಾನ್ಸ್ ದೇಶಗಳ ಒಟ್ಟು ವಿಸ್ತೀರ್ಣದಷ್ಟು ಅರಣ್ಯ ಪ್ರದೇಶವನ್ನು ಕಳೆದುಕೊಂಡ ಅಮೆಝಾನ್!

Update: 2024-09-24 16:32 GMT

PC : NDTV 

ವಾಶಿಂಗ್ಟನ್ : ಜಗತ್ತಿನ ಅತಿ ದೊಡ್ಡ ಮಳೆಕಾಡು ಅಮೆಝಾನ್‌ನಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಜರ್ಮನಿ ಹಾಗೂ ಫ್ರಾನ್ಸ್ ದೇಶಗಳ ಒಟ್ಟು ಗಾತ್ರದಷ್ಟು ವಿಸ್ತೀರ್ಣದ ಅರಣ್ಯವು ನಾಶವಾಗಿದೆಯೆಂದು ಅಧ್ಯಯನ ವರದಿಯೊಂದು ಸೋಮವಾರ ತಿಳಿಸಿದೆ.

ದಕ್ಷಿಣ ಅಮೆರಿಕ ಖಂಡದ 9 ರಾಷ್ಟ್ರಗಳಲ್ಲಿ ಹರಡಿರುವ ಅಮೆಝಾನ್ ಅರಣ ಪರಿಸರದಿಂದ ಅಪಾರ ಪ್ರಮಾಣದ ಇಂಗಾಲಾಮ್ಲವನ್ನು ಹೀರುವ ಸಾಮರ್ಥ್ಯವನ್ನು ಹೊಂದಿದ್ದು, ಹವಾಮಾನ ಬದಲಾವಣೆ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಶಕ್ತಿಯಾಗಿದೆ.

ಆದರೆ ಕಳೆದ ನಾಲ್ಕು ದಶಕಗಳಲ್ಲಿ ಗಣಿಗಾರಿಕೆ ಹಾಗೂ ಕೃಷಿ ಉದ್ದೇಶಗಳಿಗಾಗಿ ಅಮೆಝಾನ್‌ನಲ್ಲಿ ಅಪಾರ ಪ್ರಮಾಣದ ಅರಣ್ಯನಾಶವಾಗಿದೆ. 1985ರಿಂದ 2023ರವರೆಗೆ ಅಮೆಝಾನ್‌ನ ಶೇ.12.5ರಷ್ಟು ಮರಗಿಡಗಳ ಹೊದಿಕೆ ನಷ್ಟವಾಗಿದೆ ಎಂದು ಸಂಶೋಧಕರು ಹಾಗೂ ಎನ್‌ಜಿಓಗಳ ಸಂಘಟನೆಯಾದ ‘ಆರ್ಎಐಎಸ್‌ಜಿ’ ಪ್ರಕಟಿಸಿರುವ ಅಧ್ಯಯನ ವರದಿ ತಿಳಿಸಿದೆ.

ಇದರಿಂದಾಗಿ ಬ್ರೆಝಿಲ್, ಬೊಲಿವಿಯ, ಪೆರು, ಈಕ್ವಡಾರ್, ಕೊಲಂಬಿಯಾ, ವೆನೆಝುವೆಲಾ, ಗಯಾನಾ, ಸುರಿನಾಮ್ ಹಾಗೂ ಫ್ರೆಂಚ್ ಗಯಾನ ದೇಶಗಳಲ್ಲಿ ಒಟ್ಟು 88 ದಶಲಕ್ಷ ಹೆಕ್ಟೇರ್ (8.80 ಲಕ್ಷ ಚ.ಕಿ.ಮೀ.) ಅಮೆಝಾನ್ ಅರಣ್ಯ ಹೊದಿಕೆ ನಾಶವಾಗಿದೆ.

ಈ ಹಿಂದೆ ಅಮೆಝಾನ್ ಅರಣ್ಯವಿದ್ದ ಪ್ರದೇಶದ ಭೂಮಿಯನ್ನು ಈಗ ವ್ಯಾಪಕವಾಗಿ ಗಣಿಗಾರಿಕೆ, ಕೃಷಿ ಹಾಗೂ ಮೇವಿಗಾಗಿ ಬಳಸಲಾಗುತ್ತಿದೆಯೆಂದು ಆರ್‌ಎಐಎಸ್‌ಐ ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.

ಜಾನುವಾರುಗಳ ಮೇವಿನ ಪ್ರದೇಶಗಳ ವ್ಯಾಪಕ ವಿಸ್ತರಣೆ, ಸೋಯಾಬಿನ್ ಗದ್ದೆಗಳು ಅಥವಾ ಇತರ ಏಕ ಬೆಳೆಗಳ ಕೃಷಿಗಾಗಿ ಭಾರೀ ಪ್ರಮಾಣದ ಅರಣ್ಯ ನಾಶವಾಗಿದೆ. ಚಿನ್ನದ ಗಣಿಗಾರಿಕೆಯಿಂದಾಗಿ ದೊಡ್ಡ ದೊಡ್ಡ ಕಂದರಗಳು ನಿರ್ಮಾಣವಾಗಿದ್ದು, ಅಮೆಝಾನ್‌ನ ದೊಡ್ಡ ಪ್ರಮಾಣದ ಪರಿಸರ ವ್ಯವಸ್ಥೆಯ ಕಣ್ಮರೆಯಾಗಿ ಹೋಗಿದೆಯೆಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News